Bengaluru | ಚಾಲಕನಿಂದ ಲಂಚ ಪಡೆದ ಆರೋಪ: ಕಾನ್‌ಸ್ಟೇಬಲ್ ಅಮಾನತು
ಬೆಂಗಳೂರು : ಚಾಲಕನಿಂದ ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೋಮಶೇಖರ್ ಅವರನ್ನು ಬೆಂಗಳೂರು ನಗರದ ಪೂರ್ವ ವಿಭಾಗದ ಸಂಚಾರ ಪೊಲೀಸ್ ಉಪ ಆಯುಕ್ತ ಸಾಹಿಲ್ ಬಾಗ್ಲಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜು.18ರಂದು ಸಂಜೆ ಸೆಂಟ್ ಜಾನ್ಸ್ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಕಬ್ಬಿಣದ ಲೋಡ್ ತುಂಬಿದ್ದ ವಾಹನದ ವಿರುದ್ಧ ಬಿಎನ್‍ಎಸ್ 285 (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ನಿಯಮಗಳ ಪ್ರಕಾರ, ಬಿಎನ್‍ಎಸ್ 285 ಅಡಿಯಲ್ಲಿ ದಾಖಲಾಗುವ ಪ್ರಕರಣಗಳಿಗೆ ನ್ಯಾಯಾಲಯದಲ್ಲೇ ದಂಡ ಪಾವತಿಸಬೇಕಿರುತ್ತದೆ. ನ್ಯಾಯಾಧೀಶರೇ ದಂಡದ ಮೊತ್ತವನ್ನು ನಿರ್ಧರಿಸುತ್ತಾರೆ. ಈ ವಿಷಯ ತಿಳಿದಿದ್ದರೂ ಕಾನ್‌ಸ್ಟೇಬಲ್ ಸೋಮಶೇಖರ್, ವಾಹನವನ್ನು ಬಿಡಿಸಿಕೊಡುವುದಾಗಿ ಹೇಳಿ ಚಾಲಕನಿಂದ 5,000 ರೂ.ಲಂಚ ಪಡೆದಿದ್ದಾರೆ. ಈ ವೇಳೆ ಜಾಗರೂಕರಾಗಿದ್ದ ಚಾಲಕ, ಹಣ ನೀಡುವ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‍ನಲ್ಲಿ ಸೆರೆ ಹಿಡಿದುಕೊಂಡಿದ್ದರು.
ಬಳಿಕ, ಈ ಪ್ರಕರಣಕ್ಕೆ ನ್ಯಾಯಾಲಯದಲ್ಲೇ ದಂಡ ಕಟ್ಟಬೇಕು ಎಂಬ ನಿಜಾಂಶ ಚಾಲಕನಿಗೆ ತಿಳಿದು ಬಂದಿದೆ. ತನಗೆ ವಂಚಿಸಿ ಲಂಚ ಪಡೆದಿದ್ದನ್ನು ಅರಿತ ಚಾಲಕ, ಹಣ ನೀಡಿದ ವಿಡಿಯೋ ಸಾಕ್ಷ್ಯದೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರನ್ನು ಪರಿಶೀಲಿಸಿದ ಬೆಂಗಳೂರು ಪೂರ್ವ ವಿಭಾಗ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅವರು, ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರವೆಸಗಿದ ಮುಖ್ಯ ಪೇದೆ ಸೋಮಶೇಖರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.