ಬೆಂಗಳೂರು : ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಜ್ಯ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ದಾರುಲ್ ಉಲೂಮ್ ಸಬೀಲರ‌್ರಶಾದ್‌ನ ಮುಖ್ಯಸ್ಥ ಹಾಗೂ ಶೈಖುಲ್ ಹದೀಸ್ ಮುಫ್ತಿ ಅಹ್ಮದ್ ಸಿಮಾಲ್ ರಶಾದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೇ ವೇಳೆ 21 ಸದಸ್ಯರ ರಾಜ್ಯ ಕಾರ್ಯಕಾರಿ ಸಮಿತಿಯನ್ನೂ ಸರ್ವಾನುಮತದಿಂದ ರಚಿಸಲಾಯಿತು.

ಶನಿವಾರ ನಗರದಲ್ಲಿ ನಡೆದ ಮಿಲ್ಲಿ ಕೌನ್ಸಿಲ್ ರಾಜ್ಯ ಘಟಕದ ಸಾಮಾನ್ಯ ಸಭೆ ಹಾಗೂ ಚುನಾವಣಾ ಅಧಿವೇಶನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಸಂಘಟನೆಯ ಪ್ರಸ್ತುತ ಚಟುವಟಿಕೆಗಳ ಪರಿಶೀಲನೆ ನಡೆಸಿ, ರಾಜ್ಯಾದ್ಯಂತ ಸಂಘಟನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು, ಸಾರ್ವಜನಿಕ ಸಮಸ್ಯೆಗಳ ಕುರಿತ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಚರ್ಚಿಸಲಾಯಿತು.

ಮಿಲ್ಲಿ ಕೌನ್ಸಿಲ್‌ನ ಸಂವಿಧಾನದ ಪ್ರಕಾರ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಸಂಘಟನಾ ಚುನಾವಣೆ ನಡೆಯುತ್ತದೆ. ಕೇಂದ್ರ ವೀಕ್ಷಕರಾದ ಶೈಖ್ ನಿಝಾಮುದ್ದೀನ್, ಮುಫ್ತಿ ಉಮರ್ ಆಬಿದೀನ್ ಹಾಗೂ ಮುಹಮ್ಮದ್ ಆಲಂ ಅವರ ಮೇಲ್ವಿಚಾರಣೆಯಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿತು.

ನೂತನ ಪದಾಧಿಕಾರಿಗಳು: ಮುಹಮ್ಮದ್ ಫಯಾಝ್ ಶರೀಫ್(ಪ್ರಧಾನ ಕಾರ್ಯದರ್ಶಿ), ಸೈಯದ್ ಅಶ್ರಫ್, ಮೌಲಾನಾ ನೌಶಾದ್ ಆಲಂ ಖಾಸ್ಮಿ ಹಾಗೂ ಬಳ್ಳಾರಿಯ ಮೌಲಾನಾ ಖಾಝಿ ಗುಲಾಮ್ ಗೌಸ್ ಸಿದ್ದೀಖಿ ಅವರನ್ನು ಪೋಷಕರಾಗಿ ನೇಮಕ ಮಾಡಲಾಯಿತು.

ಮುಹಮ್ಮದ್ ಉಬೇದುಲ್ಲಾ ಶರೀಫ್, ಶೇಖ್ ಹಬೀಬರ‌್ರಹ್ಮಾನ್ ಸಲಫಿ, ಮೌಲಾನಾ ಮೌಲಾನಾ ಫಾರೂಕ್ ಅಝಂ ಹಾಗೂ ಡಾ.ರೋಷನ್ ಅಬ್ಬಾಸ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸೈಯದ್ ಮಝರ್ ಖಾದ್ರಿ ಹಾಗೂ ಮುಹಮ್ಮದ್ ಫಾರೂಕ್ ಅವರನ್ನು ಸಹಾಯಕ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಯಿತು. ಇಬ್ರಾಹೀಂ ಖಾನ್ ತನ್ವೀರ್ ಅವರಿಗೆ ಖಜಾಂಚಿ ಹಾಗೂ ನಸ್ರುಲ್ಲಾ ಶರೀಫ್ ಆಫ್ತಾಬ್ ಅವರಿಗೆ ಸಹಾಯಕ ಖಜಾಂಚಿ ಜವಾಬ್ದಾರಿ ವಹಿಸಲಾಯಿತು.

ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಸಹಾಯಕ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಖಾನ್, ಕೇಂದ್ರ ವೀಕ್ಷಕ ಶೇಖ್ ನಿಝಾಮುದ್ದೀನ್, ಮುಹಮ್ಮದ್ ಆಲಂ, ಕೇಂದ್ರ ಮಂಡಳಿ ಸದಸ್ಯ ಆಗಾಸುಲ್ತಾನ್ ಮಾತನಾಡಿದರು. ಸಭೆಯ ಅಂತ್ಯದಲ್ಲಿ ಮಿಲ್ಲಿ ಕೌನ್ಸಿಲ್‌ನ ಸೇವಾ ಘಟಕವಾದ ‘ಖಿದ್ಮತ್ ಬಾಯ್ಸ್’ನ ಕಾರ್ಯಚಟುವಟಿಕೆಗಳನ್ನೂ ಗುರುತಿಸಿ, ಅಭಿನಂದಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor