ದೇಶದಲ್ಲಿ SIR ಜಾರಿಯಾದ ಬಳಿಕ 7 ಚುನಾವಣೆ ನಡೆದಿದ್ದು, ಈ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿಲ್ಲ : ಪ್ರಕಾಶ್ ರಾಜ್
ಚಿಕ್ಕಮಗಳೂರು : ಎಸ್‌ಐಆರ್ ಹೆಸರಿನಲ್ಲಿ ಮತಗಳನ್ನು ಕದಿಯಲು ಬಿಜೆಪಿ ಪಕ್ಷ ಹುನ್ನಾರ ಮಾಡಿದೆ. ಇದಕ್ಕಾಗಿ ಚುನಾವಣಾ ಆಯೋಗದ ಆಯುಕ್ತರಿಗೆ ಎಲ್ಲ ಅಧಿಕಾರವನ್ನು ನೀಡುವ ಕಾನೂನನ್ನು ಹಿಂಬಾಗಿಲು ಮೂಲಕ ಜಾರಿ ಮಾಡಿದೆ. ಇದರಿಂದಾಗಿ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್‌ಕುಮಾರ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಎಸ್‌ಐಆರ್ ವಿರೋಧಿ ಜನಪರ ಸಂಘಟನೆ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ಹಮ್ಮಿಕೊಂಡಿದ್ದ ಎಸ್‌ಐಆರ್ ಮತ ವಂಚಿತ ಸಂತ್ರಸ್ತರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದರ ವಿರುದ್ಧ ದೇಶದ ಜನತೆ ಜಾಗೃತರಾಗಿ ಹೋರಾಟಕ್ಕಿಳಿಯಬೇಕು. ಗಣೇಶನ ವಿಸರ್ಜನೆ ಮುಗಿದಿದ್ದು, ಈಗ ಜ್ಞಾನೇಶನ ವಿಸರ್ಜನೆ ಮಾಡಬೇಕಿದೆ ಎಂದು ಕರೆ ನೀಡಿದರು.
ದೇಶಾದ್ಯಂತ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಫಲ್ಯದಿಂದ ಜನತೆ ರೋಸಿ ಹೋಗಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ನೆಲಕಚ್ಚುವ ಭೀತಿ ಎದುರಾಗಿದೆ. ಇದರಿಂದ ಪಾರಾಗುವ ನಿಟ್ಟಿನಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಹುನ್ನಾರ ಮಾಡಿದೆ. ಈ ಹುನ್ನಾರವೇ ಎಸ್‌ಐಆರ್. ದೇಶದಲ್ಲಿ ಎಸ್‌ಐಆರ್ ಜಾರಿಯಾದ ಬಳಿಕ 7 ಚುನಾವಣೆಗಳನ್ನು ನಡೆಸಲಾಗಿದ್ದು, ಈ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿಲ್ಲ. ಇದಕ್ಕೆ ಹಲವಾರು ಜ್ವಲಂತ ಸಾಕ್ಷಿಗಳು ಸಿಕ್ಕಿದ್ದು, ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಪರಿಶೀಲನೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ಬೀದಿ ಹೋರಾಟದೊಂದಿಗೆ ಕಾನೂನು ಹೋರಾಟವೂ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿದೆ, ಆದರೆ ಕರ್ನಾಟಕ ಮತ್ತೊಂದು ಪಶ್ಚಿಮ ಬಂಗಾಳ ಆಗಬಾರದು. ರಾಜ್ಯದಲ್ಲಿ ಈ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ, ಬಿಎಲ್‌ಒಗಳಿಗೆ ತರಬೇತಿ ನೀಡಿಲ್ಲ, ಎಸ್‌ಐಆರ್ ಬಗ್ಗೆ ಜನರಿಗೆ ಯಾವುದೇ ಮಾಹಿತಿಯೂ ಇಲ್ಲ, ಇದರ ಫಲವಾಗಿ ರಾಜ್ಯದಲ್ಲಿ 1.8ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. 43ಲಕ್ಷ ಮತದಾರರನ್ನು ಅನ್ ಮ್ಯಾಪಿಂಗ್ ಮಾಡಲಾಗಿದೆ ಎಂದ ಅವರು, ಇಂತಹ ಸಾವಿರಾರು ತಪ್ಪುಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ ಕಾವಲು ಸಮಿತಿ ಮೂಲಕ ನಾವು ಪತ್ತೆ ಮಾಡಿದ್ದೇವೆ. ಇದನ್ನು ಶೀಘ್ರ ಜನರ ಮುಂದಿಡುತ್ತೇವೆ ಎಂದು ಪ್ರಕಾಶ್ ರಾಜ್ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಎಸ್‌ಐಆರ್ ಸಂತ್ರಸ್ತರು ತಮಗೆ ಆಗಿರುವ ಅನ್ಯಾಯವನ್ನು ಹೇಳಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದವರು ಪ್ರಕಾಶ್ ರಾಜ್ ಅವರೊಂದಿಗೆ ಎಸ್‌ಐಆರ್ ಸಂಬಂಧ ಕೆಲ ಹೊತ್ತು ಸಮಾಲೋಚನೆ ನಡೆಸಿ, ಗೊಂದಲ ಪರಿಹರಿಸಿಕೊಂಡರು.
ಈ ವೇಳೆ ಒಕ್ಕೂಟದ ಮುಖಂಡರಾದ ಕೆ.ಎಲ್.ಅಶೋಕ್, ಗೌಸ್ ಮೊಹಿದ್ದೀನ್, ಗಡಿಕಲ್ ಸುರೇಶ್, ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಜಿ.ವಿಜಯ್‌ಕುಮಾರ್, ಮರ್ಲೆ ಅಣ್ಣಯ್ಯ, ಸಫ್ವಾನಾ, ಮುಸ್ತಫಾ ಆಲ್ದೂರು, ಭೀಮಯ್ಯ, ಮೋಹನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.