ಚುನಾವಣಾ ಆಯೋಗದಿಂದ ನಡೆದದ್ದು ಸಭೆಯಲ್ಲ, ತೇಪೆ ಹಚ್ಚುವ ಕ್ರಮ : ಎಸ್‍ಐಆರ್ ವಿರೋಧಿ ಒಕ್ಕೂಟ
Photo Credit : PTI
ಬೆಂಗಳೂರು : ಎಸ್‍ಐಆರ್ ಪ್ರಕ್ರಿಯೆಯ ಕುರಿತು ದೇಶಾದ್ಯಂತ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗ ಸೆ.26 ರಂದು ಕೈಗೊಂಡಿರುವ ಹೊಸ ನಿರ್ಧಾರಗಳು ಪ್ರಕ್ರಿಯೆಯಲ್ಲಿನ ಲೋಪಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿವೆ ಮತ್ತು ಸಭೆಯು ಸಂಪೂರ್ಣವಾಗಿ ತೇಪೆ ಹಚ್ಚುವ ಕ್ರಮವಾಗಿದೆ ಎಂದು ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಲೇವಡಿ ಮಾಡಿದೆ.
ರವಿವಾರ ಈ ಕುರಿತು ಒಕ್ಕೂಟದ ಪರವಾಗಿ ಜೆ.ಎಂ.ವೀರಸಂಗಯ್ಯ, ಕೆ.ಎಲ್.ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ಕೆ.ಮಹಂತೇಶ್, ಕೆ.ವಿ.ಭಟ್, ಫಾ.ಅರುಣ್ ಲೂಯಿಸ್, ತಾಹೇರ್ ಹುಸೇನ್, ಅಬ್ದುಲ್ ಮಜೀದ್, ನೂರ್ ಶ್ರೀಧರ್, ತಾರಾರಾವ್ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ ಎಂದಿದ್ದಾರೆ.
ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್, ಸುಖ್ಬಿರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಸೆ.26 ರಂದು ಸಭೆ ನಡೆಸಿ, ‘ಸರ್ವಾನುಮತದಿಂದ’ ಸಾರ್ವಜನಿಕವಾಗಿ ಹೊರಡಿಸಿದ ಸಭೆಯ ನಡಾವಳಿಗಳು ಅಸಲಿಗೆ ತಪ್ಪೊಪ್ಪಿಗೆ ಪತ್ರವಾಗಿದೆ. ಎಸ್‍ಐಆರ್ ಪ್ರಕ್ರಿಯೆಯಲ್ಲಿ ತಾರ್ಕಿಕ ವ್ಯತ್ಯಾಸ ಮತ್ತು ಅನ್‍ಮ್ಯಾಪಿಂಗ್ ವರ್ಗದಲ್ಲಿ ನೋಟಿಸ್ ಪಡೆದ ಮತದಾರರು ಈ ಹಿಂದೆ, ಇಆರ್ ಒ/ಎಇಆರ್ ಒ ಮುಂದೆ ವಯಕ್ತಿಕ ವಿಚಾರಣೆಯನ್ನು ಎದುರಿಸಬೇಕಿತ್ತು. ಸಭೆಯ ನಡಾವಳಿಗಳಂತೆ, ಇದೀಗ ವಯಕ್ತಿಕ ವಿಚಾರಣೆಯನ್ನು ಎಲ್ಲರೂ ಎದುರಿಸಬೇಕಿಲ್ಲ ಎಂದು ನಿರ್ಣಯ ಮಾಡಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಬಿಎಲ್‍ಒಗಳೇ ಮತದಾರರ ಮನೆಗೆ ಹೋಗಿ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಅಗತ್ಯ ಇದ್ದವರು ಮಾತ್ರ ವಿಚಾರಣೆಗೆ ಒಳಗಾಗಬೇಕು. ಅವರು ಕೂಡ ಇಆರ್ ಒಗಳ ಕಚೇರಿಗೆ ಕಡ್ಡಾಯವಾಗಿ ಬರುವ ಅಗತ್ಯವಿಲ್ಲ ಮತ್ತು ಮತದಾರರ ಪರವಾಗಿ ಮನೆಯವರಾದ ಯಾವುದೇ ವಯಸ್ಕರರು ಭಾಗಿಯಾಗಬಹುದು, ಅದನ್ನು ಆನ್‍ಲೈನ್‍ನಲ್ಲಿಯೇ ಮಾಡಿಕೊಳ್ಳಬಹುದು ಎಂದು ಆಯೋಗ ತಿಳಿಸಿದೆ. ಅಂದರೆ ಈ ಹಿಂದೆ ಸಾಫ್ಟವೇರ್ ಮಾಡಿದ ತಪ್ಪಿಗೆ ಮತದಾರರನ್ನೇ ಅಪರಾಧಿಗಳಂತೆ ವಿಚಾರಣೆ ಮಾಡಿ ಹಿಂಸೆ ನೀಡಿದ್ದು ತಪ್ಪು ಎಂದು ಆಯೋಗ ಒಪ್ಪಿಕೊಂಡಂತಾಗಿದೆ ಎಂದು ವಿವರಿಸಿದ್ದಾರೆ.
ನೊಟೀಸ್ ಪಡೆದ ಮತದಾರರು ದಾಖಲಾತಿಗಳನ್ನು ನೀಡಲು ಕಛೇರಿಗಳು ಅಲೆಯಬೇಕಿಲ್ಲ, ಬಿಎಲ್‍ಒಗಳೇ ಮತದಾರರ ಮನೆಗೆ ಹೋಗಿ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ ಈ ಹಿಂದೆ ಬಿಹಾರ, ಪ.ಬಂಗಾಳ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ನಡೆದ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದ್ದು ತಪ್ಪು ಎಂದು ಒಪ್ಪಿಕೊಂಡಿದೆ. ಹಾಗಾದರೆ ಎಸ್‍ಐಆರ್ ಒಂದು ರಾಜ್ಯಕ್ಕೆ ಒಂದು ಕಾನೂನು, ಬೇರೊಂದು ರಾಜ್ಯಗಳಿಗೆ ಮತ್ತೊಂದು ನಿಯಮ ಎನ್ನವುದು ಆಯೋಗ ಮಾಡುತ್ತಿರುವ ನೇರ ತಾರತಮ್ಯವಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಎಸ್‍ಐಆರ್ ಎಂಬುದು ದೋಷಪೂರಿತ, ಅವೈಜ್ಞಾನಿಕ ಮತ್ತು ಅಸಂವಿಧಾನಿಕ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಎಸ್‍ಐಆರ್ ಅನ್ನು ರದ್ದು ಮಾಡಬೇಕು. ಕಾನೂನು ಬಾಹಿರವಾಗಿ ಏಕಪಕ್ಷೀಯ ನೀರ್ಧಾರವನ್ನು ಮಾಡಿದ್ದೂ ಅಲ್ಲದೆ, ಜನರನ್ನು ಅಪ್ರಜಾತಾಂತ್ರಿಕವಾಗಿ ಪರದಾಡುವಂತೆ ಮಾಡಿ, ನೋಟಿಸ್ ನೀಡಿ ಅವಮಾನಿಸಿ ಜನರಿಗೆ ಹಿಂಸೆ ನೀಡಿದ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಚುನಾವಣಾ ಆಯುಕ್ತರ ಮೇಲೆ ಸಿವಿಲ್ ಅಥವಾ ಕ್ರಿಮಿನಲ್ ಪ್ರೊಸಿಡಿಂಗ್ಸ್ ನಡೆಯಬಾರದೆಂಬ 2023ರ ಕಾಯಿದೆ ತಿದ್ದುಪಡಿಯನ್ನು ರದ್ಧಗೊಳಿಸಿ, ಸುಪ್ರೀಂಕೋರ್ಟ್ ಸುವೋಮೋಟೊ ಕೇಸ್ ಹಾಕಿ ಬಂಧಿಸಬೇಕು ಮತ್ತು ಇದರಲ್ಲಿ ಭಾಗಿಯಾದ ಎಲ್ಲರ ವಿರುದ್ಧ ತನಿಖೆಯಾಗಬೇಕು. ಎಸ್‍ಐಆರ್ ಪ್ರಕ್ರಿಯೆಯಲ್ಲಿ ಮತದಾರರನ್ನು ಹೊರಗಿಟ್ಟು ನಡೆದ ಚುನಾವಣೆಗಳು ಪ್ರಜಾತಂತ್ರದ ವಿರೋಧಿಯಾಗಿದೆ. ವಿಶೇಷವಾಗಿ ಪರಿಣಾಮ ಬಿದ್ದಿರುವ ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳ ಫಲಿತಾಂಶವನ್ನು ರದ್ದು ಮಾಡಬೇಕು ಮತ್ತು ಎಸ್‍ಐಆರ್ ಮೂಲಕ ಹೊರಗಿಟ್ಟ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸಿಕೊಂಡು ಮರು ಚುನಾವಣೆಗಳನ್ನು ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.