ಬೆಂಗಳೂರು : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗೆ ಅನುಕೂಲವಾಗುವ ಅಧಿಕೃತ ಜಾಲತಾಣಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಂದುಳಿದ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ರಾಜ್ಯ ಸರಕಾರ ಹಲವು ನಿಗಮಗಳನ್ನು ಸ್ಥಾಪಿಸಿದೆ. ಇವುಗಳ ಮೂಲಕ ಅನೇಕ ಯೋಜನೆಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಇನ್ನೂ ಹೆಚ್ಚಿನ ಅಗತ್ಯ ಅನುದಾನವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿಗಮ ಅಧ್ಯಕ್ಷ ಮಂಜುನಾಥ್ ಪೂಜಾರಿ ಮಾತನಾಡಿ, ನಿಗಮದಿಂದ ವಿವಿಧ ಯೋಜನೆಗಳಿಗೆ ನ.15ರಿಂದ ನಿಗಮದ ನೂತನ ಜಾಲತಾಣ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ನಾಲ್ಕು ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದ್ದು, ದೇವರಾಜು ಅರಸು ಅಭಿವೃದ್ಧಿ ನಿಗಮದ ‘ವಿಶ್ವಾಸ್’ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ-120, ಅರಿವು ಶೈಕ್ಷಣಿಕ ಸಾಲ ಯೋಜನೆ-100, ಗಂಗಾ ಕಲ್ಯಾಣ ಯೋಜನೆ-70, ಸ್ವಾವಲಂಬಿ ಸಾರಥಿ ಯೋಜನೆ-62 ಫಲಾನುಭವಿಗಳನ್ನು ಆಯ್ಕೆ ಮಾಡುವ ಬೌತಿಕ ಗುರಿ ಹೊಂದಲಾಗಿದೆ. ಈಗಾಗಲೇ ಸರಕಾರ ನೀಡಿರುವ 10 ಕೋಟಿ ರೂ.ಅನುದಾನದಲ್ಲಿ 3.50 ಕೋಟಿ ರೂ.ಮೊತ್ತದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಜನವರಿ 1ರೊಳಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು. ಜಿಲ್ಲೆಗೆ ಮೂರರಿಂದ ನಾಲ್ಕು, ಎರಡರಿಂದ ಮೂರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ನಿಗಮಕ್ಕೆ 100 ಕೋಟಿ ರೂ.ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನಾರಾಯಣ ಗುರು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಧಾಕರ್ ಮಾತನಾಡಿ, ನ.27ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಒಕ್ಕೂಟ ಸಮಾವೇಶದಲ್ಲಿ ನಿಗಮಕ್ಕೆ 100 ಕೋಟಿ ರೂ.ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಶಾಸಕ ಬಸನಗೌಡ ತುರುವಿಹಾಳ, ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಭರ್ಮಪಣ್ಣ, ಕಾಂಗ್ರೆಸ್ ಮುಖಂಡ ರವಿ ಭೋಸರಾಜು, ದೇವರಾಜು ಅರಸು ಅಭಿವೃದ್ಧಿ ನಿಗಮ ಹಣಕಾಸು ಪ್ರಧಾನ ವ್ಯವಸ್ಥಾಪಕಿ ಪ್ರೀತಿ ವರ್ಣೇಕರ್ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor