Bengaluru | ಯುವತಿ ಅತ್ಯಾಚಾರ ಆರೋಪ; ಕೇರಳದ ಯುವಕನ ಬಂಧನ
ಸಾಂದರ್ಭಿಕ ಚಿತ್ರ | PC : Image by wirestock on Magnific
ಬೆಂಗಳೂರು : ರಾಜಸ್ಥಾನ ಮೂಲದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಹೋಟೆಲ್‍ನಲ್ಲಿ ಮದ್ಯ ಕುಡಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಕೇರಳದ ಮೂಲದ ಯುವಕನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಯನ್ನು ಕಾರು ಡೀಲರ್ ಸಮೀರ್(30) ಎಂದು ಗುರುತಿಸಲಾಗಿದದೆ. ಈತ ಮೂಲತಃ ಕೇರಳದ ನಿವಾಸಿಯಾಗಿದ್ದು, ನಗರದ ಮಡಿವಾಳದಲ್ಲಿ ವಾಸವಾಗಿದ್ದನು.
ಕಾರು ಡೀಲರ್ ವ್ಯವಹಾರ ಮಾಡಿಕೊಂಡು ಬೆಂಗಳೂರು ಮತ್ತು ಕೇರಳದ ನಡುವೆ ಓಡಾಡಿಕೊಂಡಿದ್ದ. ಈ ನಡುವೆ ಕೋರಮಂಗಲದ ಪಬ್ ಈತ ಹೋಗಿದ್ದಾಗ ರಾಜಸ್ಥಾನದ ಜೈಪುರದ ಬ್ಯೂಟಿಷಿಯನ್ ಅಲ್ಲಿಗೆ ಬಂದಿದ್ದರು. ಆಗ ಸಿಗರೇಟ್ ಸೇದಲು ಸಮೀರ್ ಬಳಿ ಈಕೆ ಲೈಟರ್ ಕೇಳಿದ್ದಳು. ಲೈಟರ್ ನೀಡಿದ ಆರೋಪಿ ಬಳಿಕ ಈಕೆಯನ್ನು ಪರಿಚಯಿಸಿಕೊಂಡು ಮೊಬೈಲ್ ನಂಬರ್ ವಿನಿಮಯ ಮಾಡಿ ಕೊಂಡರು.
ನಂತರ ಇಬ್ಬರ ಮಧ್ಯೆ ಸ್ನೇಹ ಬೆಳೆದು ಆರೋಪಿ ಸಮೀರ್ ಬ್ಯೂಟಿಷಿಯನ್ ಅನ್ನು ಮದುವೆಯಾಗುವುದಾಗಿ ಹೇಳಿದ್ದ. ಈ ನಡುವೆ ಮಡಿವಾಳದ ಹೋಟೆಲ್‍ವೊಂದಕ್ಕೆ ಇಬ್ಬರೂ ಹೋಗಿದ್ದು, ಕೊಠಡಿಯಲ್ಲಿ ಮದ್ಯ ಸೇವಿಸಿದ್ದಾರೆ. ನಶೆ ಬರುವಂತೆ ಕುಡಿಸಿ ಆಕೆಯ ಮದ್ಯದ ಅಮಲಿನಲ್ಲಿದ್ದಾಗ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಮಾರನೇ ದಿನ ಹೋಟೆಲ್ ನಿಂದ ಹೊರಬಂದ ಯುವತಿ ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.