ಬೆಂಗಳೂರು : ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಕುಡಿಯುವ ನೀರಿನ ಅಗತ್ಯವನ್ನು ಕಾಯ್ದಿರಿಸಿ, ಉಳಿದ ನೀರನ್ನು ನ.30ರ ವರೆಗೆ ಕಾಲುವೆಗಳಿಗೆ ಹರಿಸಿ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಸಿಂಗ್, ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಅವರು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಪ್ರಸ್ತುತ ಒಟ್ಟಾರೆ ಸುಮಾರು 53 ಟಿಎಂಸಿ ನೀರು ಲಭ್ಯವಿದ್ದು, ಅ.15ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.12ರ ವರೆಗೆ ವಾರಾಬಂದಿ ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು ಎಂದು ತಿಳಿಸಿದರು.

ಆದರೆ, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಹತ್ತಿ, ತೊಗರಿ ಮತ್ತು ಮೆಣಸಿನಕಾಯಿ ಬೆಳೆಗಳು ನಿರ್ಣಾಯಕ ಹಂತದಲ್ಲಿದ್ದು, ನೀರಿನ ಕೊರತೆಯಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಕೈಗೆ ಬಂದ ಬೆಳೆ ನೀರಿನ ಕೊರತೆಯಿಂದ ಹಾಳಾದರೆ ರೈತರು ಮತ್ತಷ್ಟು ಸಾಲದ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಅಜಯ್ ಧರ್ಮಸಿಂಗ್ ಹೇಳಿದರು.

ಈಗಿನ ಪರಿಸ್ಥಿತಿಯಲ್ಲಿ ಲಭ್ಯವಿರುವ ನೀರನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಿ, ಕುಡಿಯುವ ನೀರಿನ ಅಗತ್ಯವನ್ನು ಸುರಕ್ಷಿತವಾಗಿರಿಸಿಕೊಂಡು ಬೆಳೆ ರಕ್ಷಣೆಗೆ ಸಾಧ್ಯವಾದಷ್ಟು ನೀರು ಒದಗಿಸಬೇಕು ಎಂದು ಅಜಯ್ ಧರ್ಮಸಿಂಗ್ ತಿಳಿಸಿದರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವಿವಿಧ ಭಾಗಗಳಲ್ಲಿ ರೈತರು ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಿ ಬೆಳೆಗಳನ್ನು ಉಳಿಸುವಂತೆ ಮನವಿ ಮಾಡುತ್ತಿದ್ದು, ರೈತರ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಬರದ ಸಂದರ್ಭದಲ್ಲಿ ರೈತನನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. ಕುಡಿಯುವ ನೀರಿನ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ, ಉಳಿದ ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ನ.30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಅಜಯ್ ಧರ್ಮಸಿಂಗ್ ಕೋರಿದರು.

ಈ ಸಂದರ್ಭದಲ್ಲಿ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗು ಸುರಪುರ ಶಾಸಕ ವೇಣುಗೋಪಾಲ್ ನಾಯಕ್ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor