ನ.9ರಂದು ರಾಜ್ಯ ಉರ್ದು ಅಕಾಡಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ: ಯು.ಟಿ.ಖಾದರ್
ಬೆಂಗಳೂರು : ನ.9ರಂದು ವಿಶ್ವ ಉರ್ದು ದಿನಾಚರಣೆ ಹಾಗೂ ರಾಜ್ಯ ಉರ್ದು ಅಕಾಡಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಪುರಭವನ(ಟೌನ್ ಹಾಲ್)ದಲ್ಲಿ ಆಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ತಿಳಿಸಿದರು.
ಗುರುವಾರ ನಗರದಲ್ಲಿರುವ ಮೌಲಾನಾ ಆಝಾದ್ ಭವನದಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ರಾಜ್ಯ ಉರ್ದು ಅಕಾಡಮಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಉರ್ದು ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಅಂದು ದಿನವಿಡೀ ಸಾಹಿತ್ಯ, ಸಂಸ್ಕೃ ತಿ ಹಾಗೂ ಕಲಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಉರ್ದು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಅಕಾಡಮಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಉರ್ದು ಭಾಷೆ ಮತ್ತು ಸಾಹಿತ್ಯದ ಮಹತ್ವ, ಅದರ ಶ್ರೀಮಂತ ಪರಂಪರೆ ಹಾಗೂ ಸಮಾಜದಲ್ಲಿ ಹೊಂದಿರುವ ವಿಶಿಷ್ಟ ಸ್ಥಾನವನ್ನು ಜನರಿಗೆ ಪರಿಚಯಿಸುವುದು ಉರ್ದು ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಉರ್ದು ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ಸಾಮೂಹಿಕ ಸಂಸ್ಕೃ ತಿ, ಪರಂಪರೆ ಹಾಗೂ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ ಎಂದು ಖಾದರ್ ತಿಳಿಸಿದರು.
ಈ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರಕಾರದ ನಿರಂತರ ಪ್ರಯತ್ನಗಳ ಜೊತೆಗೆ ಉರ್ದು ಭಾಷಿಕ ಸಮುದಾಯದ ಸಕ್ರಿಯ ಸಹಭಾಗಿತ್ವವೂ ಅಗತ್ಯ. ಉರ್ದುವಿನ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವುದು ಹಾಗೂ ಭಾಷೆಯ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಾಜ್ಯ ಉರ್ದು ಅಕಾಡಮಿ ಅಧ್ಯಕ್ಷ ಮುಫ್ತಿ ಮುಹಮ್ಮದ್ ಅಲಿ ಖಾಝಿ, ಸದಸ್ಯರಾದ ಮುಹಮ್ಮದ್ ಆಝಂ ಶಾಹಿದ್, ನಾತಿಕ್ ಅಲಿ ಪುರಿ, ಮುಹಮ್ಮದ್ ಆಬಿದ್ ಅಸ್ಲಂ, ಶಾಹಿದ್ ಖಾಝಿ, ರಿಜಿಸ್ಟ್ರಾರ್ ಇಜಾಝ್ ಅಹ್ಮದ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.