ಬೆಂಗಳೂರು : ವಿಧಾನಸೌಧಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಕನ್ನಡದ ಮಹತ್ವದ ಚಿಂತನೆಗಳು ಪರಿಚಯವಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಗುರುವಾರ ನಗರದ ವಿಧಾನಸೌಧದಲ್ಲಿ ಕನ್ನಡ ಭಾಷೆಯ ಘನತೆ, ಕನ್ನಡ ನಾಡಿನ ಸಾಂಸ್ಕೃ ತಿಕ ಶ್ರೀಮಂತಿಕೆ ಹಾಗೂ ಕನ್ನಡದ ಚಿಂತನಾ ಪರಂಪರೆಯನ್ನು ಸಾರುವ 110 ಕನ್ನಡ ನುಡಿ ಫಲಕಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಡಳಿತಸೌಧಗಳ ಗೋಡೆಗಳು ಕನ್ನಡ ನುಡಿ, ನಾಡಿನ ಮೌಲ್ಯಗಳ ಕುರಿತಂತೆ ಮಾತನಾಡುವಂತಾಗಬೇಕು. ಕನ್ನಡದ ಸಾರ್ವಭೌಮತ್ವವನ್ನು ಸಾರ್ವಜನಿಕ ಬದುಕಿನ ಪ್ರತಿಯೊಂದು ವಲಯದಲ್ಲಿಯೂ ಪ್ರತಿಪಾದಿಸುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇಂತಹ ಪ್ರಯತ್ನಗಳ ಉದ್ದೇಶವಾಗಿದೆ ಎಂದು ಹೇಳಿದರು.

ವಿಧಾನಸೌಧವು ಕೇವಲ ಆಡಳಿತದ ಕಟ್ಟಡವಲ್ಲ. ಅದು ಕನ್ನಡ ನಾಡಿನ ಸ್ವಾಭಿಮಾನ, ಇತಿಹಾಸ ಮತ್ತು ಸಾಂಸ್ಕೃ ತಿಕ ಅಸ್ಮಿತೆಯ ಪ್ರತೀಕವೂ ಹೌದು. ಇಂತಹ ಜನರ ಅರಮನೆಯ ಆಯ್ದ ಸ್ಥಳಗಳಲ್ಲಿ ಕನ್ನಡದ ಮಹತ್ವದ ಚಿಂತನೆಗಳು ಮತ್ತು ಮೌಲ್ಯಗಳನ್ನು ಸಾರುವ ನುಡಿ ಫಲಕಗಳನ್ನು ಅಳವಡಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ಆಡಳಿತ ಕೇಂದ್ರದಲ್ಲಿ ಕನ್ನಡದ ಧ್ವನಿ ನಿರಂತರವಾಗಿ ಮೊಳಗಬೇಕೆಂಬುದು ಈ ಯೋಜನೆಯ ಆಶಯ ಎಂದು ತಿಳಿಸಿದರು.

ವಿಧಾನಸೌಧದ ಆಯ್ದ 110 ಸ್ಥಳಗಳಲ್ಲಿ ಪಂಪ, ಅಲ್ಲಮ, ಬಸವಣ್ಣ, ಕುವೆಂಪು, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಸಿದ್ದಲಿಂಗಯ್ಯ, ಜಯದೇವಿತಾಯಿ ಲಿಗಾಡೆ, ಆರ್.ಕಲ್ಯಾಣಮ್ಮ ಸೇರಿದಂತೆ 55 ಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಮಹನೀಯರ ಬರಹಗಳಿಂದ ಘೋಷವಾಕ್ಯಗಳನ್ನು ಆಯ್ಕೆ ಮಾಡಲಾಗಿದೆ. ಇವು ಕೇವಲ ಅಲಂಕಾರಿಕ ಫಲಕಗಳಲ್ಲ. ಕನ್ನಡ ನಾಡಿನ ಚಿಂತನೆ, ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃ ತಿಕ ಪರಂಪರೆಯನ್ನು ಪ್ರತಿನಿಧಿಸುವ ಸಂದೇಶಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ರಿಝ್ವಾನ್ ಅರ್ಶದ್, ಯು.ಟಿ.ಖಾದರ್, ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ, ಝಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಎಚ್.ಸಿ.ಬಾಲಕೃಷ್ಣ ಮತ್ತಿತರರು ಹಾಜರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor