ಲೈಂಗಿಕ ದೌರ್ಜನ್ಯ ಪ್ರಕರಣ; ಸಂತ್ರಸ್ತೆಗೆ ಪರಿಹಾರದ ಮೊತ್ತ 1 ಲಕ್ಷದಿಂದ 7 ಲಕ್ಷ ರೂ.ಗೆ ಹೆಚ್ಚಿಸಿದ ಹೈಕೋರ್ಟ್
ಬೆಂಗಳೂರು: ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಪರಿಣಾಮ ಗರ್ಭಧರಿಸಿ, ವೈದ್ಯಕೀಯ ಮಂಡಳಿಯ ಸಲಹೆಯಂತೆ ಗರ್ಭಪಾತ ಮಾಡಿಸಿಕೊಂಡಿರುವ ಸಂತ್ರಸ್ತೆಗೆ 1 ಲಕ್ಷ ರೂ. ಪರಿಹಾರ ಅತ್ಯಲ್ಪ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪರಿಹಾರದ ಮೊತ್ತವನ್ನು 7 ಲಕ್ಷ ರೂ. ಗಳಿಗೆ ಹೆಚ್ಚಿಸಿದೆ.
ವಿಶೇಷ ನ್ಯಾಯಾಲಯವು ಸಂತ್ರಸ್ತ ಪರಿಹಾರ ಯೋಜನೆಯಡಿ ಘೋಷಿಸಿದ್ದ 1 ಲಕ್ಷ ರೂ. ಪರಿಹಾರದ ಮೊತ್ತ ಹೆಚ್ಚಳ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ತ್ಯಾಗರಾಜ ಎನ್. ಇನವಳ್ಳಿ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಈ ತೀರ್ಪು ನೀಡಿದೆ.
ಹೆಚ್ಚಿಸಿರುವ ಪರಿಹಾರ ಮೊತ್ತವನ್ನು ಪಾವತಿಸಲು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ಶಿಫಾರಸು ಮಾಡಿದೆ. ಜತೆಗೆ, ಸಂತ್ರಸ್ತೆ ಈಗಾಗಲೇ ಪ್ರಾಪ್ತ ವಯಸ್ಕಳಾಗಿರುವುದರಿಂದ, ಠೇವಣಿಯಾದ ಬಳಿಕ ಪರಿಹಾರದ ಸಂಪೂರ್ಣ ಹಣವನ್ನು ಆಕೆಗೆ ನೀಡಬೇಕು ಎಂದೂ ನ್ಯಾಯಪೀಠ ತಿಳಿಸಿದೆ.
ಪರಿಹಾರ ನಿಗದಿಪಡಿಸುವಾಗ ಅಪರಾಧದ ಗಂಭೀರತೆ, ಸಂತ್ರಸ್ತೆಗೆ ಉಂಟಾದ ದೈಹಿಕ ಮತ್ತು ಮಾನಸಿಕ ಹಾನಿಯ ತೀವ್ರತೆ, ಚಿಕಿತ್ಸೆ ಹಾಗೂ ಸಮಾಲೋಚನೆಯ ವೆಚ್ಚ ಮತ್ತಿತರ ಅಂಶಗಳನ್ನು ಪರಿಗಣಿಸಬೇಕು. ಜತೆಗೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ನಷ್ಟವೂ ಯೋಜನೆಯಡಿ ಪರಿಗಣಿಸಬೇಕಾದ ಅಂಶಗಳಾಗಿವೆ ಎಂದು ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಲ್‌ಎಸ್‌ಎ) 2018ರ ಪರಿಹಾರ ಯೋಜನೆಯಲ್ಲಿನ 4 ಲಕ್ಷ ದಿಂದ 7 ಲಕ್ಷದ ಪರಿಹಾರ ಶ್ರೇಣಿಯನ್ನು ನ್ಯಾಯಪೀಠ ಉಲ್ಲೇಖಿಸಿದೆ. ಅಪ್ರಾಪ್ತ ವಯಸ್ಸಿನಲ್ಲಿ ದೌರ್ಜನ್ಯಕ್ಕೊಳಗಾಗಿ, ಗರ್ಭಧಾರಣೆ ಮತ್ತು ಗರ್ಭಪಾತದಿಂದ ಸಂತ್ರಸ್ತೆ ಅನುಭವಿಸಿದ ಆಘಾತವನ್ನು ಗಮನಿಸಿದರೆ 1 ಲಕ್ಷ ರೂ. ಪರಿಹಾರ ಅತ್ಯಂತ ಕಡಿಮೆ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದ ಸಂಗತಿಗಳು ಹಾಗೂ ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಪರಿಗಣಿಸಿದಾಗ 7 ಲಕ್ಷ ರೂ. ಪರಿಹಾರ ನ್ಯಾಯಸಮ್ಮತ ಮತ್ತು ಸಮಂಜಸ ಎಂದು ತೀರ್ಮಾನಿಸಿ ಪರಿಹಾರದ ಮೊತ್ತ ಹೆಚ್ಚಿಸಿದೆ.