×
Ad

ಬಾಕಿಯಿರುವ ಸಾಗಾಣಿಕೆ ಗುತ್ತಿಗೆದಾರರ ವೆಚ್ಚದ ಬಿಲ್ ಪಾವತಿಸದಿದ್ದರೆ ಜು.1 ರಿಂದ ಅನಿರ್ದಿಷ್ಟಾವಧಿ ಹೋರಾಟ

Update: 2025-06-18 22:38 IST

ಬೆಂಗಳೂರು : ಅನ್ನಭಾಗ್ಯ ಹಾಗೂ ಎನ್‍ಎಫ್‍ಎಸ್‍ಎ ಯೋಜನೆಗಳ ಆಹಾರಧಾನ್ಯ ಸಾಗಣಿಕೆ ವೆಚ್ಚದ ಬಾಕಿಯಿರುವ ಬಿಲ್ ಪಾವತಿಸದಿದ್ದರೆ ಜುಲೈ 1ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಜ್ಯ ಪಡಿತರ ಆಹಾರಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಸಂಘದ ಸಾಗಾಣಿಕೆ ಗುತ್ತಿಗೆದಾರರು 2025ರ ಫೆಬ್ರವರಿಯಿಂದ ಜೂನ್ ತಿಂಗಳ ವರೆಗೆ ಅನ್ನಭಾಗ್ಯ ಯೋಜನೆ ಹಾಗೂ ಎಪ್ರಿಲ್, ಮೇ ಮತ್ತು ಜೂನ್ ತಿಂಗಳ ಎನ್‍ಎಫ್‍ಎಸ್‍ಎ ಯೋಜನೆಯಡಿಯಲ್ಲಿ ಆಹಾರಧಾನ್ಯ ಸಾಗಾಣಿಕೆ ಕಾರ್ಯವನ್ನು ಮಾಡಿರುತ್ತಾರೆ ಎಂದು ಹೇಳಿದರು.

ಸಾಗಾಣಿಕೆ ಗುತ್ತಿಗೆದಾರರುಗಳಿಗೆ ಇಲ್ಲಿಯವರೆಗೂ ಸಾಗಾಣಿಕೆ ವೆಚ್ಚದ ಬಿಲ್ ಮೊತ್ತ ಪಾವತಿಯಾಗಿಲ್ಲ. ಅಲ್ಲದೇ ಸಾಗಾಣಿಕೆ ಟೆಂಡರ್‌ಗಳಲ್ಲಿ ಭಾಗವಹಿಸುವಾಗ ನೀಡಿದ್ದ ಇಎಮ್‍ಡಿ ಮೊತ್ತಗಳು ಈಗಾಗಲೇ ಬ್ಯಾಂಕ್ ಗ್ಯಾರಂಟಿಗಳನ್ನು ನೀಡಿದ್ದರೂ ಗುತ್ತಿಗೆದಾರರುಗಳಿಗೆ ಮರುಪಾವತಿಯಾಗಿಲ್ಲ. ಕೆಲವು ಟೆಂಡರ್ ದಾರರುಗಳಿಗೆ ಟೆಂಡರ್ ಆಗದ ತಾಲೂಕುಗಳ ಇಎಂಡಿ ಹಣವು ಹಿಂದಿರುಗಿರುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

2025ರ ಜುಲೈ ಮಾಹೆಯ ಆಹಾರ ಧಾನ್ಯ ಹಂಚಿಕೆಯ ಆದೇಶವು ಬರುವ ಹಂತದಲ್ಲಿದ್ದು, ಹಸ್ತಾಂತರ ಮತ್ತು ಸಾಗಾಣಿಕೆ ಕಾರ್ಯನಿರ್ವಹಿಸಲು ಗುತ್ತಿಗೆದಾರರುಗಳಿಗೆ ಹಣಕಾಸಿನ ಮುಗಟ್ಟು ಹೆಚ್ಚಾಗಿರುವ ಕಾರಣ ಆಹಾರ ಧಾನ್ಯ ಎತ್ತುವಳಿ ಕಾರ್ಯನಿರ್ವಹಿಸಲು ಕಷ್ಟಕರವಾಗಿರುತ್ತದೆ. ಆದುದರಿಂದ ಸಾಗಾಣಿಕೆ ಗುತ್ತಿಗೆದಾರರಿಗೆ ಸಾಗಾಣಿಕೆ ವೆಚ್ಚದ ಬಿಲ್ ಮೊತ್ತವು ಈ ಕೂಡಲೇ ಪಾವತಿ ಮಾಡಬೇಕು. ಇಲ್ಲದಿದ್ದರೆ ಸಾಗಾಣಿಕೆ ಗುತ್ತಿಗೆದಾರರ ಹಣಕಾಸಿನ ಮುಗ್ಗಟ್ಟಿನಿಂದ ಪಡಿತರ ಆಹಾರ ಧಾನ್ಯ ಸಾಗಾಣಿಕೆ ಕಾರ್ಯವು ಜುಲೈ ತಿಂಗಳಿನಿಂದ ಅನಿವಾರ್ಯವಾಗಿ ನಿಲ್ಲುತ್ತದೆ ಎಂದು ಷಣ್ಮುಗಪ್ಪ ತಿಳಿಸಿದರು.

ಅಧ್ಯಕ್ಷ ಕೆ.ಪಂಪಾವತಿ ಪಾಟೀಲ ಮಾತನಾಡಿ, ಕೆಎಫ್‍ಸಿಎಸ್‍ಸಿ ಗೋದಾಮು ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರಿಗೆ ನೀಡಬೇಕಿರುವ ಇಎಸ್‍ಐ, ಪಿಎಫ್, ಗ್ರಾಚುಟಿ ವಿಷಯವಾಗಿ ಹಲವು ಗೊಂದಲಗಲಿದ್ದು ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯವರು ಲೋಡಿಂಗ್ ಅನ್ ಲೋಡಿಂಗ್ ಲೇಬರ್ಸ್ ಯೂನಿಯನ್ ಅಧ್ಯಕ್ಷರನ್ನು ಕರೆದು ಸಭೆ ನಡೆಸಿ ಕೂಡಲೇ ಗೊಂದಲಗಳನ್ನು ಬಗೆಹರೆಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಮುಹಮ್ಮದ್ ಝೈನುಲ್ ಆಬಿದೀನ್, ಉಪಾಧ್ಯಕ್ಷ ರಾಜ್ ಮುಹಮ್ಮದ್ ಖಾನ್ ಪಠಾಣ್, ಕಾರ್ಯದರ್ಶಿ ಸುರೇಶ ಎ.ಪಟ್ಟಣಶೆಟ್ಟಿ, ಸಹ ಕಾರ್ಯದರ್ಶಿ ಬಿ.ಬಿ. ಮಹೇಶ್, ಖಜಾಂಚಿ ಜಗನ್ನಾಥ್ ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News