ಜುಲೈ 1ರಿಂದ ಬೆಸ್ಕಾಂ ವ್ಯಾಪ್ತಿಯ ಹಳ್ಳಿಗಳಲ್ಲಿ ಹೊಸ-ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ
ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ಸ್ಮಾರ್ಟ್ ಮೀಟರ್ ಅಳವಡಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಗ್ರಾಮೀಣ ಭಾಗದಲ್ಲಿ ಹೊಸ ಸಂಪರ್ಕ ಹಾಗೂ ತಾತ್ಕಾಲಿಕ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ 2025 ರ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ಸ್ಮಾರ್ಟ್ ಮೀಟರ್ ಅಳವಡಿಸಬೇಕಿದೆ.
ಇನ್ನೂ, ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ ಸೇರಿದಂತೆ ಎಲ್ಲ ನಗರ ಪ್ರದೇಶಗಳಲ್ಲಿ 2025ರ ಫೆಬ್ರವರಿ 15ರಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭಗೊಂಡಿದ್ದು, ಈಗ ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೂ ಕೂಡಾ ಯೋಜನೆ ವಿಸ್ತರಿಸಲಾಗಿದೆ.
ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರು ಅರ್ಜಿ ಸಲ್ಲಿಸಿ, ಬೆಸ್ಕಾಂನ ನೋಂದಾಯಿತ ಮಳಿಗೆಗಳಿಂದ ಸ್ಮಾರ್ಟ್ ಮೀಟರ್‌ಗಳನ್ನು ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬಹುದು ಎಂದು ಬೆಸ್ಕಾಂ ಪ್ರಕಟನೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಸ್ಕಾಂ ಅಧಿಕಾರಿಗಳು, ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು 2024ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ಮೀಟರ್ ವಿಶೇಷತೆಯೇನು :
► ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.
► ಅಡ್ವಾನ್ಸ್ಡ್ ಮೀಟರಿಂಗ್ ಇನ್‌ಫ್ರಾಸ್ಟ್ರಕ್ಚರ್ (ಎಎಂಐ) ತಂತ್ರಜ್ಞಾನದ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಬೆಸ್ಕಾಂ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ.
► ಹಳೆಯ ಮಾದರಿಯ ಮೀಟರ್‌ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್ ಮೀಟರ್‌ಗಳು ಜಿಪಿಆರ್‌ಎಸ್/ಆರ್‌ಎಫ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ.
► ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ.
► ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್ ಮಾಡಿಕೊಳ್ಳಬಹುದು.