×
Ad

ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಸಮಾನ ಮನಸ್ಕರ ಆಗ್ರಹ

Update: 2025-08-26 22:24 IST

ಬೆಂಗಳೂರು, ಆ.26: ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ನ್ಯಾ. ಎಚ್.ಎನ್.ನಾಗಮೋಹನ್‍ದಾಸ್ ಏಕ ಸದಸ್ಯ ಆಯೋಗದ ವರದಿಯಲ್ಲಿ ನಿಗದಿ ಪಡಿಸಿದ್ದ ಶೇ.1ರಷ್ಟು ಪ್ರತ್ಯೇಕ, ಗುಂಪಿನಲ್ಲಿ ಮೀಸಲಾತಿ ನೀಡಲು ಆಗ್ರಹಿಸಿ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಕಲಾವಿದರು ಹಾಗೂ ಸಮಾನ ಮನಸ್ಕರ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಶಾಸಕರ ಭವನದಲ್ಲಿ ನಡೆದ ಸಾಹಿತಿಗಳು, ಚಿಂತಕರು, ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನ್ಯಾ.ನಾಗಮೋಹನ್‍ದಾಸ್ ಆಯೋಗದ ವರದಿಯ ಅನುಸಾರ ಅಸ್ಪೃಶ್ಯ ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಯಥಾವತ್ತು ಜಾರಿಗೊಳಿಸಬೇಕು. ಜತೆಗೆ ತೆಲಂಗಾಣದ ಮಾದರಿಯಲ್ಲಿ ಮೀಸಲಾತಿ ಬಿಂದುವನ್ನು ಜಾರಿಗೊಳಿಸುವಂತೆ ಸಭೆಯಲ್ಲಿ ಭಾಗವಹಿಸಿದ್ದ ಸಮಾನ ಮನಸ್ಕರು ಒತ್ತಾಯಿಸಿದರು.

ಶೇ.1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳು ಅಲೆಮಾರಿ ಸಮುದಾಯದ ಹಕ್ಕು. ಹಾಗಾಗಿ ಅದನ್ನೂ ಸಹ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ 49ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು. ಇತರೆ ಸಮುದಾಯಗಳನ್ನು ಕೈಬಿಡಬೇಕು ಎಂದು ನಿರ್ಣಯಿಸಿದರು.

ಹಿರಿಯ ಸಾಹಿತಿ ಡಾ.ರಹಮತ್ ತರೀಕೆರೆ ಮಾತನಾಡಿ, ಶೇ.1ರಷ್ಟು ಮೀಸಲಾತಿ ವಿಷಯವನ್ನು ಜೀವಂತವಾಗಿಡಲು ಜನಾಭಿಪ್ರಾಯವನ್ನು ರೂಪಿಸಬೇಕು. ಅಲೆಮಾರಿ ಸಮುದಾಯಗಳ ವಾಸ್ತವ ಚಿತ್ರಣ ಬೇರೆ ರೀತಿಯಲ್ಲಿದೆ. ಅಲೆಮಾರಿ ಸಮುದಾಯ ಎಷ್ಟೊಂದು ಧಾರುಣಾವಸ್ಥೆಯಲ್ಲಿದೆ ಎನ್ನುವುದನ್ನು ಹೇಳುವ ಪ್ರಯತ್ನ ನಾವೆಲ್ಲರೂ ಮಾಡಬೇಕು. ನ್ಯಾ.ನಾಗಮೋಹನ್‍ದಾಸ್ ಆಯೋಗದ ವರದಿ ಯಥಾಸ್ಥಿತಿಯಲ್ಲಿ ಜಾರಿಗೆ ಬರುವಂತೆ ಒತ್ತಾಯಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಹಿರಿಯ ಸಾಹಿತಿ ರಾಜಪ್ಪ ದಳವಾಯಿ, ಶಿಕ್ಷಣ ತಜ್ಞ ಪ್ರೊ.ನಿರಂಜನರಾಧ್ಯ, ಶ್ರೀಪಾದ್ ಭಟ್, ಅಂಕಣಕಾರ ಶಿವಸುಂದರ್, ಹೋರಾಟಗಾರರಾದ ಡಾ.ವಾಸು.ಎಚ್.ವಿ, ಬಸವರಾಜ್ ಕೌತಾಳ್, ಅಂಬಣ್ಣ ಅರೋಲಿಕರ್, ಪ್ರೊ.ಎ.ಎಸ್.ಪ್ರಭಾಕರ್, ಲೇಖಕಿ ಡಾ.ಕೆ.ಶರೀಫಾ, ಲೇಖಕ ದಾಸನೂರು ಕೂಸಣ್ಣ, ವಕೀಲ ವಿನಯ್ ಶ್ರೀನಿವಾಸ್, ಮೈತ್ರೇಯಿ, ಪ್ರಾಧ್ಯಾಪಕ ಡಾ.ಹುಲಿಕುಂಟೆ ಮೂರ್ತಿ, ,ಪ್ರೊ.ಬಿ.ಸಿ.ಬಸವರಾಜ್, ಡಾ.ಟಿ.ಗೋವಿಂದರಾಜ್, ಕವಿ ಟಿ.ಯಲ್ಲಪ್ಪ, ಕಥೆಗಾರ ದಯಾನಂದ, ಕೆಸ್ತಾರ ವಿ.ಮೌರ್ಯ, ಡಿ.ಟಿ.ವೆಂಕಟೇಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News