×
Ad

ದುಡಿಯುವ ಅವಧಿ 10 ಗಂಟೆಗೆ ಏರಿಕೆಯ ಪ್ರಸ್ತಾವಕ್ಕೆ ಎಸ್‍ಯುಸಿಐ ಖಂಡನೆ

Update: 2025-06-19 21:37 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು: ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು 9 ರಿಂದ 10 ಗಂಟೆಗೆ ಹಾಗೂ ಹೆಚ್ಚುವರಿ ಅವಧಿಯನ್ನು 10 ರಿಂದ 12 ಗಂಟೆಗೆ ಏರಿಕೆ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ನಡೆಯನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಕಾರ್ಯದರ್ಶಿ ಕೆ ಉಮಾ ತಿಳಿಸಿದ್ದಾರೆ.

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, 8 ಗಂಟೆ ದುಡಿತ, 8 ಗಂಟೆ ವಿಶ್ರಾಂತಿ, 8 ಗಂಟೆ ಖಾಸಗಿ ಬದುಕು ಎಂಬ ವೈಜ್ಞಾನಿಕ ನೀತಿ, ಕಾರ್ಮಿಕರ ರಕ್ತಸಿಕ್ತ ಹೋರಾಟದ ಫಲವಾಗಿ ಜಗತ್ತಿನಾದ್ಯಂತ ಒಪ್ಪಿತವಾಗಿದೆ. ಆದರೆ ಉದಾರೀಕರಣ, ಖಾಸಗಿಕರಣ ಜಾರಿಯಾದ ನಂತರ ಬಂಡವಾಳಶಾಹಿಗಳ ಗರಿಷ್ಠ ಲಾಭದ ದಾಹವನ್ನು ಪೂರೈಸಲು ಕಾರ್ಮಿಕರನ್ನು ಮಿತಿಮೀರಿ ಶೋಷಣೆ ಮಾಡಲು ಸರಕಾರಗಳು ಅವಕಾಶಮಾಡಿಕೊಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿ ಕೆಲಸದ ಅವಧಿಯನ್ನು ಹೆಚ್ಚಿಸುವುದರಿಂದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಮತ್ತು ಉದ್ಯೋಗಗಳು ನಷ್ಟವಾಗುತ್ತವೆ ಎಂಬುದು ನೀತಿ ನಿರೂಪಕರಿಗೆ ಅರ್ಥವಾಗದ ವಿಷಯವಲ್ಲ. ಆದಾಗ್ಯೂ, ಇಂತಹ ನೀತಿ ಬರಲು ಇಂದು ಚಿಲ್ಲರೆ ವ್ಯಾಪಾರದ ಮೇಲೆ ಹಿಡಿತ ಸಾಧಿಸುತ್ತಿರುವ ದೇಶ ವಿದೇಶಗಳ ಬೃಹತ್ ಮಾಲ್‍ಗಳ ಒಡೆಯರ ಪ್ರಭಾವವೇ ಕಾರಣ ಎಂಬುದು ದುಡಿಯುವ ಜನರ ಆಕ್ಷೇಪವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೊತೆಗೆ 10ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಅಂಗಡಿಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದಲೇ ಹೊರಗಿಡುವ ಪ್ರಸ್ತಾಪವು, ಈ ಸರಕಾರಕ್ಕೆ ದುಡಿಯುವ ಜನರ ಕುರಿತಾದ ನಿಷ್ಕಾಳಜಿಯನ್ನು ತೋರಿಸುತ್ತದೆ. ಆದುದರಿಂದ ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣವೇ ಕೈ ಬಿಡಬೇಕೆಂದು ಶೋಭಾ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News