ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 13 ಸಾವಿರ ಸ್ವತ್ತುಗಳಿಗೆ ಅಂತಿಮ ಇ-ಖಾತಾ ವಿತರಣೆ : ಬೈರತಿ ಸುರೇಶ್
ಬೆಂಗಳೂರು : ಇ-ಖಾತಾ ಎಂಬುದು ಬೆಂಗಳೂರಿನ ಆಸ್ತಿ, ನಿವೇಶನಗಳ ಮಾಲಕತ್ವಕ್ಕೆ ಇರುವ ಅಧಿಕೃತ ದಾಖಲೆಯಾಗಿದೆ. ಇಲ್ಲಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಸ್ವತ್ತುಗಳಿದ್ದು, ಈ ಪೈಕಿ 13 ಸಾವಿರ ಸ್ವತ್ತುಗಳಿಗೆ ಈಗಾಗಲೇ ಅಂತಿಮ ಇ-ಖಾತಾವನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಆರ್.ಟಿ.ನಗರದ ಎಚ್.ಎಮ್.ಟಿ ಮೈದಾನದಲ್ಲಿ ಆಯೋಜಿಸಿರುವ ‘ಬೃಹತ್ ಇ-ಖಾತಾ ಮೇಳ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೆಬ್ಬಾಳ ಕ್ಷೇತ್ರದಲ್ಲಿ ಎಲ್ಲ ಸ್ವತ್ತುಗಳಿಗೆ ಇ-ಖಾತಾವನ್ನು ವಿತರಿಸಲು ಮೇಳದಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಇ-ಖಾತಾ ಮೇಳವು ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಸದುದ್ದೇಶವನ್ನು ಹೊಂದಿರುವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ನಗರದಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇ-ಖಾತಾ ಮೇಳವನ್ನು ಆಯೋಜಿಸಲಾಗುತ್ತಿದೆ. ನಾಗರೀಕರು ಮೇಳದ ಸದುಪಯೋಗ ಪಡೆದು, ತಮ್ಮ ಸ್ವತ್ತಿನ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಇ-ಖಾತಾವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಆರ್. ಮಾತನಾಡಿ, ಪೂರ್ವ ವಲಯದಲ್ಲಿ ಇ-ಖಾತಾ ಮೇಳದ ಆಯೋಜನೆಯ ಮೂಲಕ ಸುಲಭವಾಗಿ ಇ-ಖಾತಾ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳಿದ್ದು, ಈಗಾಗಲೇ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ ಎಂದು ತಿಳಿಸಿದರು.
ಇ-ಖಾತಾ ಮೇಳದ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಈ ಮೇಳವನ್ನು ನಾಳೆಯೂ(ಜು.23) ಮುಂದುವರೆಸಲಾಗುತ್ತಿದೆ. ಇ-ಖಾತಾ ಪಡೆಯಬೇಕಿರುವ ನಾಗರಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಇ-ಖಾತಾ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತೆ ಸರೋಜಾ, ಉಪ ಆಯುಕ್ತ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಕಾರ್ಯಪಾಲಕ ಅಭಿಯಂತರರು ಚಂದ್ರಶೇಖರ್ ಸೇರಿ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇ-ಖಾತೆ ಪಡೆಯಲು ಬೇಕಾದ ದಾಖಲೆಗಳು
* ನೋಂದಾಯಿತ ಆಸ್ತಿ ಪತ್ರ
* ಆಸ್ತಿ ತೆರಿಗೆ ರಶೀದಿ
* ಬೆಸ್ಕಾಂ ಮೀಟರ್ ಸಂಖ್ಯೆ
* ಆಸ್ತಿಯ ಜಿಪಿಎಸ್ ಸಹಿತ ಫೋಟೋ
* ಆಧಾರ್ ಕಾರ್ಡ್ ಪ್ರತಿ
* ಇಸಿ(ಋಣಭಾರ ಪತ್ರ)
* ಖಾತಾ ಪ್ರತಿ