×
Ad

ಕ್ವಾಂಟಮ್ ಕ್ಷೇತ್ರದ ರೋಡ್ ಮ್ಯಾಪ್ ತಯಾರಿಸಲು ಜು.16ಕ್ಕೆ ಉನ್ನತ ಸಮಿತಿ ಸಭೆ : ಸಚಿವ ಭೋಸರಾಜು

Update: 2025-07-14 22:15 IST

ಬೆಂಗಳೂರು : ಕರ್ನಾಟಕ ರಾಜ್ಯವನ್ನು ದೇಶದ ಕ್ವಾಂಟಮ್ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಿದ್ದು, ರೋಡ್ ಮ್ಯಾಪ್ ತಯಾರಿಸುವ ನಿಟ್ಟಿನಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಡಾ.ಸುಧಾಕರ್ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆಯನ್ನು ಜು.16ರಂದು ಆಯೋಜಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿ ಈಗಾಗಲೇ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಯಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದೆ. ದೇಶದಲ್ಲೇ ಪ್ರಪ್ರಥಮವಾಗಿ ವಿಶ್ವದ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾಗಿರುವ ಐಐಎಸ್‍ಸಿಯಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕನ್ನು ಸ್ಥಾಪಿಸಲಾಗಿದೆ. ಅದರ ಎರಡನೇ ಹಂತದ ಅಭಿವೃದ್ದಿಗಾಗಿ 48ಕೋಟಿ ರೂ.ಗಳನ್ನು ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯ ಅದರಲ್ಲೂ ಬೆಂಗಳೂರು ನಗರ ಕ್ವಾಂಟಮ್‍ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರುವಂತಹ ವಾತಾವರಣ ಹೊಂದಿದೆ. ನಗರದಲ್ಲಿರುವ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಳ್ಳುವುದರಿಂದ ವಿಶ್ವ ಭೂಪಟದಲ್ಲಿ ಕ್ವಾಂಟಮ್ ಕ್ಷೇತ್ರದ ಹಬ್ ಆಗಿ ರೂಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ದೇಶದಲ್ಲೇ ಮೊದಲ ಬಾರಿಗೆ ಕ್ವಾಂಟಮ್ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಪೂರಕವಾದ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ರಾಜ್ಯ ಸರಕಾರ ಅಗತ್ಯ ತಯಾರಿ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಕೈಗಾರಿಕಾ ಸಚಿವರು, ಐಟಿ-ಬಿಟಿ ಸಚಿವರು, ಉನ್ನತ ಶಿಕ್ಷಣ ಸಚಿವರು ಹಾಗೂ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಜು.16ರಂದು ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಂತಹ ಪ್ರಮುಖ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಭೋಸರಾಜು ತಿಳಿಸಿದ್ದಾರೆ.

ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ, ಕ್ವಾಂಟಮ್ ಸೆನ್ಸಿಂಗ್ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಸ್ಟಾರ್ಟ್‍ಅಪ್‍ಗಳನ್ನು ಉತ್ತೇಜಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಸಭೆಯಲ್ಲಿ ಕ್ವಾಂಟಮ್ ಆಕ್ಷನ್ ಪ್ಲಾನ್ ರೂಪಿಸಲು, ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ನೀತಿ ನಿಯಮಗಳನ್ನು ರೂಪಿಸಲು, ಮಾನವ ಸಂಪನ್ಮೂಲದ ಕೌಶಲ್ಯಾಭಿವೃದ್ದಿಗೆ ಅಗತ್ಯವಿರುವಂತಹ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News