ಕೋವಿಡ್-19 ಕುರಿತ ಸಿಎಂ ಹೇಳಿಕೆಗೆ ಕಿರಣ್ ಮಜುಂದಾರ್ ಶಾ ಟೀಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣವಿರಬಹುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಯೋಕಾನ್ ಕಂಪೆನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಇದು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.
ಗುರುವಾರ ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಲಸಿಕೆ ಲಕ್ಷಾಂತರ ಜೀವಗಳನ್ನು ಉಳಿಸಿದೆ. ಎಲ್ಲ ಲಸಿಕೆಗಳಂತೆ ಇದರಲ್ಲಿಯೂ ಸಣ್ಣಪುಟ್ಟ ಅಡ್ಡಪರಿಣಾಮಗಳು ಇರಬಹುದು. ಲಸಿಕೆಯ ಬಗ್ಗೆ ಆರೋಪ ಮಾಡುವ ಬದಲು ಅವುಗಳ ಅಭಿವೃದ್ಧಿಯ ಹಿಂದಿನ ವಿಜ್ಞಾನವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅದು ಅಲ್ಲದೆ, ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್-19 ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿತ್ತು. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ವಿಷಯದಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸಲಾಗಿದೆ. ಈ ಲಸಿಕೆಗಳನ್ನು ತರಾತುರಿಯಲ್ಲಿ ಅನುಮೋದಿಸಲಾಗಿದೆ ಎಂದು ಹೇಳುವುದು ವಾಸ್ತವಕ್ಕೆ ವಿರುದ್ಧವಾಗಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ಕೊಡುತ್ತದೆ ಎಂದೂ ಉಲ್ಲೇಖಿಸಿದ್ದಾರೆ.
ಸಿಎಂ ಹೇಳಿದ್ದೇನು?
ಹಾಸನ ಜಿಲ್ಲೆಯಲ್ಲಿ ಹೃದಾಯಘಾತದಿಂದ ಮೃತಪಟ್ಟ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋವಿಡ್ ಲಸಿಕೆ ತರಾತುರಿಯಲ್ಲಿ ಅನುಮೋದನೆ ಕೊಟ್ಟು ಜನರಿಗೆ ಹಂಚಿದ್ದು ಹೃದಯಾಘಾತಕ್ಕೆ ಕಾರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.