ಬೆಂಗಳೂರು | ಡೇಟಿಂಗ್ ಆ್ಯಪ್‍ನಲ್ಲಿ ಹನಿಟ್ರ್ಯಾಪ್ : ಟೆಕ್ಕಿಯಿಂದ 2 ಲಕ್ಷ ರೂ. ದರೋಡೆಗೈದ ಆರು ಮಂದಿ ಸೆರೆ
ಸಾಂದರ್ಭಿಕ ಚಿತ್ರ | PC: Meta Ai
ಬೆಂಗಳೂರು : ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ ಪ್ರಕರಣದಡಿ ಆರು ಮಂದಿ ಆರೋಪಿಗಳನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರಮುಖ ಆರೋಪಿ ಸಂಗೀತಾ ಹಾಗೂ ಆಕೆಯ ಸ್ನೇಹಿತರಾದ ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಶೇಕ್, ಬೀರ್‍ಬಲ್ ಎಂಬುವರನ್ನು ಬಂಧಿತರು ಎಂದು ಗುರುತಿಸಲಾಗಿದೆ. ಟೆಕ್ಕಿಯಾದ ರಾಕೇಶ್ ರೆಡ್ಡಿ ಎಂಬಾತ ನೀಡಿದ ದೂರಿನನ್ವಯ ಯಲಹಂಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಟೆಕ್ಕಿ ರಾಕೇಶ್ ರೆಡ್ಡಿ ಎಂಬವರು ‘ಪಂಬಲ್’ ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂಗೀತಾ ಎಂಬಾಕೆಗೆ ಪರಿಚಿತರಾಗಿದ್ದರು. ಸಂಗೀತಾ ತನ್ನ ಯಲಹಂಕದ ಮನೆಯಲ್ಲಿಗೆ ಆಹ್ವಾನಿಸಿದ್ದಾಳೆ. ಈ ವೇಳೆ, ತನ್ನ ಬ್ಯಾಗ್‍ನಲ್ಲಿ ಬೇಕಿಂಗ್ ಸೋಡಾ ಇಟ್ಟುಕೊಂಡು, ಇದು ಡ್ರಗ್ಸ್ ಎಂದು ಆತನ ಮುಂದೆ ನಾಟಕವಾಡಿದ್ದಾಳೆ. ಇನ್ನೊಂದೆಡೆ, ಆಗಲೇ ತಯಾರಿ ಮಾಡಿಕೊಂಡಿದ್ದ ಆಕೆಯ ಸ್ನೇಹಿತರು ಆ ಮನೆಯೊಳಕ್ಕೆ ನುಗ್ಗಿ ರಾಕೇಶ್ ರೆಡ್ಡಿಗೆ ಹಲ್ಲೆ ಮಾಡಿದ್ದಾರೆ. ನಂತರ, ‘ಡ್ರಗ್ ಪಾರ್ಟಿ ಮಾಡುತ್ತಿದ್ದೀಯ’ ಎಂದು ಬೆದರಿಸಿ, ಟೆಕ್ಕಿಯಿಂದ 2 ಲಕ್ಷ ರೂಪಾಯಿ ಹಣವನ್ನು ಬಲವಂತವಾಗಿ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.