×
Ad

ಬೆಂಗಳೂರು ಮೆಟ್ರೋ ಹಂತ-2 ಮತ್ತು 3ಎ ಪ್ರಸ್ತಾವನೆಗಳ ಪರಿಗಣನೆ : ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್‌

Update: 2025-05-23 22:49 IST

ಬೆಂಗಳೂರು : ರಾಜ್ಯ ಸರಕಾರದ ಅನುಮೋದನೆಗಳ ನಂತರ ಬೆಂಗಳೂರು ಮೆಟ್ರೋ ಹಂತ-2 ಮತ್ತು 3ಎ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರವು ಪರಿಗಣಿಸಲಿದೆ ಎಂದು ಕೇಂದ್ರ ವಸತಿ, ನಗರ ವ್ಯವಹಾರಗಳು ಮತ್ತು ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್‌ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ವಸತಿ, ನಗರಾಭಿವೃದ್ಧಿ ಹಾಗೂ ಇಂಧನ ಇಲಾಖೆಯ ವಿವಿಧ ಯೋಜನೆಗಳ ಕಾರ್ಯಾಚರಣೆಗಳ ಕಾರ್ಯಕ್ಷಮತೆಯ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಬೆಂಗಳೂರು ಮೆಟ್ರೋ ಹಂತ-3 ಎ ಅನುಮೋದನೆಯ ನಂತರ, ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು 75 ಕಿ.ಮೀ ಮೆಟ್ರೋ ಜಾಲವು ಕಾರ್ಯನಿರ್ವಹಿಸುತ್ತಿದೆ ಹಾಗೂ ಸುಮಾರು 145 ಕಿ.ಮೀ ಮೆಟ್ರೋ ಜಾಲವು ನಿರ್ಮಾಣ ಹಂತದಲ್ಲಿದೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆ, ಕೇಂದ್ರ ಸರಕಾರವು 15,600 ಕೋಟಿ ರೂ. ವೆಚ್ಚದಲ್ಲಿ 45 ಕಿ.ಮೀ ಮೆಟ್ರೋ ಹಂತ-3 ಜಾಲವನ್ನು ಮಂಜೂರು ಮಾಡಿದೆ ಎಂದು ಮನೋಹರ್ ಲಾಲ್ ಹೇಳಿದರು.

ರಾಜ್ಯ ಸರಕಾರವು ಬೆಂಗಳೂರು ಹಂತ-3ಎ ನ ಪ್ರಸ್ತಾವನೆಯನ್ನು ಸುಮಾರು 28,400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 37 ಕಿ.ಮೀ.ನ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಂತ-3ಎ ಜಾಲದ ವೆಚ್ಚದ ಅಂದಾಜನ್ನು ತಜ್ಞರುಳ್ಳ ಸಂಸ್ಥೆಯು ಪರಿಶೀಲಿಸಬೇಕಾಗಿದೆ. ಕೇಂದ್ರ ಸರಕಾರವು ಈಗಾಗಲೇ ಈ ನಿಟ್ಟಿನಲ್ಲಿ ನಿರ್ದೇಶನ ನೀಡಿದೆ. ಕರ್ನಾಟಕ ಸರಕಾರದಿಂದ ಉತ್ತರ ಬಂದ ನಂತರ ಯೋಜನೆಯನ್ನು ಕೇಂದ್ರ ಸರಕಾರದಿಂದ ಅನುಮೋದನೆಗಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನಗರದ ಸುಧಾರಣೆಗಳಿಗಾಗಿ ಹಳೆಯ ತ್ಯಾಜ್ಯದ ರಾಶಿ (ಲೆಗಸಿ ವೇಸ್ಟ್) ನಿರ್ವಹಣೆಗೆ ಆದ್ಯತೆ ನೀಡಲು ಮತ್ತು ಎಸ್.ಎಸ್.ಎ.ಎಸ್.ಸಿ.ಐ 2025-26 ಅನ್ನು ಬಳಸಲು ಒತ್ತಾಯಿಸಿದ ಕೇಂದ್ರ ಸಚಿವ, ವಿವಿಧ ಯೋಜನೆ ಕಾರ್ಯಾಚರಣೆಗಳ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಹಳೆಯ ತ್ಯಾಜ್ಯದ ರಾಶಿ (ಲೆಗಸಿ ವೇಸ್ಟ್)ಯ ಸಮಸ್ಯೆಗಳನ್ನು ಆದ್ಯತೆಯ ಮೇಲೆ ನಿಭಾಯಿಸಲು ಸೂಚಿಸಿದ ಅವರು, ಸಂಸ್ಕರಿಸಿದ ಬಳಸಿದ ನೀರಿನ ಮರುಬಳಕೆಗೆ ಒತ್ತು ನೀಡಬೇಕು. ನಗರ ಪ್ರದೇಶಗಳಲ್ಲಿ ಸಿಹಿನೀರಿನ ಮೂಲಗಳ ಸುಸ್ಥಿರತೆಯನ್ನು ಹೆಚ್ಚಿಸಲು ನೀರಿನ ಮರುಬಳಕೆಯು ಈಗಿನ ಸಮಯದ ಅಗತ್ಯವಾಗಿದೆ ಎಂದು ಹೇಳಿದರು.

ಸಾಮೂಹಿಕ ಸಾರಿಗೆ ಕ್ಷೇತ್ರಗಳಲ್ಲಿ ಹೆಚ್ಚಿನ ಎಫ್.ಎ.ಆರ್ ಅನ್ನು ಅನುಮತಿಸುವ ಬಗ್ಗೆ ಒತ್ತಿ ಹೇಳಿದ ಅವರು, ಇದು ನಗರಗಳನ್ನು ಮರುರೂಪಿಸಲು, ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಭಾರತ ಸರಕಾರದ ಅನುಮೋದಿತ ಯೋಜನೆಗಳ ಜೊತೆಗೆ, ರಾಜ್ಯದ ನಿಧಿಯ ಅವಶ್ಯಕತೆಯ ಕುರಿತು ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾವಿಸಿದ ಅವರು, ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ವಿಶೇಷ ಸಹಾಯ ಯೋಜನೆ (ಎಸ್.ಎಸ್.ಎ.ಎಸ್.ಸಿ.ಐ) 2025-26' ಅಡಿಯಲ್ಲಿ 50 ವರ್ಷಗಳ ಬಡ್ಡಿರಹಿತ ಸಾಲವನ್ನು ಪಡೆಯಲು, ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯ ಸರಕಾರವನ್ನು ಪ್ರೋತ್ಸಾಹಿಸಿದರು.

ಪರಿಶೀಲನೆಯ ಸಂದರ್ಭದಲ್ಲಿ ರಾಜ್ಯದ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನಾ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಇಂಧನ ಸಚಿವ ಕೆ.ಜೆ.ಜಾರ್ಜ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News