×
Ad

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ʼಅಂಗಾಂಗ ದಾನ ಪ್ರತಿಜ್ಞಾ ಅಭಿಯಾನʼ

Update: 2025-08-30 16:15 IST

ಬೆಂಗಳೂರು, ಆ.30 : ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಒಂದು ತಿಂಗಳ ಅಭಿಯಾನವನ್ನು ಹಮ್ಮಿಕೊಂಡಿದೆ.

ಆಗಸ್ಟ್ 29ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಧಾತೃ (DHATHRU- Donating Humanity and Transplanting Hope) ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನದಲ್ಲಿ ವಿಶ್ವವಿದ್ಯಾಲಯದ 336 ಸಿಬ್ಬಂದಿ ಹಾಗೂ ಅದರ ಎಲ್ಲಾ ಸಂಯೋಜಿತ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸ್ವ-ಇಚ್ಚೆಯಿಂದ ಅಂಗಾಂಗ ದಾನ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ.

ಆಗಸ್ಟ್ 29ರಂದು ಅಂಗಾಂಗ ದಾನ ಪ್ರತಿಜ್ಞಾ ಅಭಿಯಾನಕ್ಕೆ ಚಾಲನೆ ನೀಡಿದ ಕುಲಪತಿಗಳಾದ ಡಾ.ಭಗವಾನ್ ಬಿ ಸಿ, "ವೈದ್ಯಕೀಯ ವೃತ್ತಿಯಲ್ಲಿರುವ ನಾವು ಜೀವಗಳನ್ನು ಉಳಿಸುವುದರ ಮೌಲ್ಯ ಹಾಗೂ ಸಾರ್ಥಕತೆಯನ್ನು ಅರ್ಥೈಸಿಕೊಂಡಿದ್ದೇವೆ ಎಂದು ಭಾವಿಸುತ್ತೇನೆ. ಹಾಗೂ ಈ ಕರ್ತವ್ಯ ಪ್ರಜ್ಞೆಯನ್ನು ನಿಮಗೂ ನೆನಪಿಸಲು ಬಯಸುತ್ತೇನೆ. ಈ ಉದ್ದೇಶದ ಭಾಗವಾಗಿ ಪ್ರತಿಯೊಬ್ಬರೂ ಸ್ವ-ಇಚ್ಚೆಯಿಂದ ಅಂಗಾಂಗ ದಾನ ಪ್ರತಿಜ್ಞೆ ಕೈಗೊಳ್ಳುವ ಮೂಲಕ ವೈದೈಕೀಯ ಘನತೆಯನ್ನು ಎತ್ತಿ ಹಿಡಿಯಬೇಕು”” ಎಂದು ಮನವಿ ಮಾಡಿದರು.

ವೈದ್ಯಕೀಯ ವೃತ್ತಿಯಲ್ಲಿ ಇರುವ ನಾವೆಲ್ಲಾ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗೂ ಮಾನವ ಕುಲಕ್ಕೆ ಮಾದರಿಯಾಗುವ ದೃಢ ನಿರ್ಧಾರ ಕೈಗೊಳ್ಳಬೇಕು. ನಿಮ್ಮೆಲ್ಲರ ಬೆಂಬಲದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಮಹತ್ವದ ಅಭಿಯಾನವನ್ನು ಹಮ್ಮಿಕೊಂಡಿದೆ. ಒಬ್ಬ ಅಂಗಾಂಗ ದಾನಿ ಎಂಟು ಜನರ ಜೀವ ಉಳಿಸಬಲ್ಲ. ಈ ಸದ್ಭಾವನೆಯನ್ನು ವಾಸ್ತವಕ್ಕೆ ತರಲು ಪ್ರತಿಯೊಬ್ಬರೂ ಪಣ ತೊಡಬೇಕಿದೆ" ಎಂದು ತಿಳಿಸಿದರು.

ದೇಶದಲ್ಲಿ ಕಳೆದ ವರ್ಷ ಸುಮಾರು 17ರಿಂದ 18 ಸಾವಿರ ಅಂಗಾಂಗ ಕಸಿ ಮಾಡಲಾಗಿದೆ. ಆದರೆ, ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ 2ಲಕ್ಷಕ್ಕೂ ಅಧಿಕ. ಅಂಗಾಂಗ ದಾನದಲ್ಲಿ ಅಮೆರಿಕ ಮತ್ತು ಚೀನಾ ನಂತರ ಭಾರತ 3ನೇ ಸ್ಥಾನದಲ್ಲಿದೆ. (ಮೂಲ-The annual report by the National Organ and Tissue Transplant Organisation (NOTTO) under the Union Health Ministry) ಭಾರತದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಧಾರವಾಡ ಮೊದಲ ಸ್ಥಾನದಲ್ಲಿದೆ ಎಂದರು.

1.60ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ನಮಲ್ಲಿ ಅಂಗಾಂಗ ದಾನ ಪ್ರತಿಜ್ಞೆ ಕೈಗೊಂಡವರ ಸಂಖ್ಯೆ ಕೇವಲ ಸುಮಾರು ನಾಲ್ಕು ಲಕ್ಷದಷ್ಟು. ಹೆಚ್ಚು ಹೆಚ್ಚು ಜನರು ಅಂಗಾಂಗ ದಾನ ಮಾಡಲು ಮುಂದೆ ಬರಬೇಕು. ಅದಕ್ಕೆ ನಾವು ಪ್ರೇರಣೆಯಾಗಬೇಕು ಎನ್ನುವುದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶಯವಾಗಿದೆ. ಈ ಉದ್ದೇಶವನ್ನು ಸಾರ್ಥಕಗೊಳಿಸಲು ವಿಶ್ವವಿದ್ಯಾಲಯದ 336 ಸಿಬ್ಬಂದಿ ಹಾಗೂ ವಿಶ್ವವಿದ್ಯಾಲಯದ ಎಲ್ಲಾ ಸಂಯೋಜಿತ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಲ್ಲಿ ವಿಶ್ವವಿದ್ಯಾಲಯ ಕಳಕಳಿಯ ಮನವಿ ಮಾಡುತ್ತಿದೆ" ಎಂದಿದ್ದಾರೆ.

https://notto.abdm.gov.in/register   ಸೋಟೊ ವೇದಿಕೆಯಲ್ಲಿ ಎಲ್ಲಾ ಸಿಬ್ಬಂದಿ ವರ್ಗ ಅಂಗಾಂಗ ದಾನ ಪ್ರತಿಜ್ಞೆಗೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News