×
Ad

ಬೋಸ್ ಇಂಡಿಯಾ ವಿಸ್ತರಣೆ : ಮಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ

BeyondBengaluru ಯೋಜನೆಗೆ ಪೂರಕವಾದ ಬೆಳವಣಿಗೆ : ಪ್ರಿಯಾಂಕ್‌ ಖರ್ಗೆ

Update: 2025-09-11 20:21 IST

PC : boseprofessional

ಮಂಗಳೂರು/ಬೆಂಗಳೂರು : ಆಡಿಯೋ ತಂತ್ರಜ್ಞಾನ ದೈತ್ಯ ಬೋಸ್ ಪ್ರೊಫೆಷನಲ್ ತನ್ನ ಪ್ರಧಾನ ಕಚೇರಿಯಾಚೆಗಿನ ಮೊದಲ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸಿದೆ. ಇದು ಕಂಪನಿಯ ಜಾಗತಿಕ ಹಾದಿಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.

ಹೊಸ ಘಟಕವು ಎಂಬೆಡೆಡ್ ಸಾಫ್ಟ್‌ವೇರ್, ಅಪ್ಲಿಕೇಶನ್‌ಗಳು ಮತ್ತು ಕ್ಲೌಡ್ ತಂತ್ರಜ್ಞಾನಗಳ ಮೇಲೆ ಕಾರ್ಯತಂತ್ರದ ಗಮನ ಹರಿಸಲಿದೆ. ಸಂಸ್ಥೆಯ ಸಿಇಒ ಜಾನ್ ಮೇಯರ್ ಮಂಗಳೂರಿಗೆ ಭೇಟಿ ನೀಡಿ ಮಾತನಾಡುವ ವೇಳೆ, "ಈ ಕೇಂದ್ರವು ಕೇವಲ ಸಂಶೋಧನೆ ಮತ್ತು ಅಭಿವೃದ್ಧಿ ಮಾತ್ರವಲ್ಲ, ಭವಿಷ್ಯದಲ್ಲಿ ಮಾರಾಟ, ಕಾರ್ಯಾಚರಣೆ ಮತ್ತು ಹಣಕಾಸು ವಿಭಾಗಗಳನ್ನೂ ಒಳಗೊಂಡ ಸಮಗ್ರ ಬೆಂಬಲ ಕೇಂದ್ರವಾಗಿ ಬೆಳೆದು ನಿಂತುಕೊಳ್ಳಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾನ್‌ ಮೇಯರ್ ಅವರ ಪ್ರಕಾರ, ಮಂಗಳೂರು ಘಟಕವು ಒಬ್ಬ ಉದ್ಯೋಗಿಯಿಂದ ಪ್ರಾರಂಭಗೊಂಡಿದ್ದು, ಈಗಾಗಲೇ 25 ಜನರನ್ನು ಹೊಂದಿದೆ. ಶೀಘ್ರದಲ್ಲೇ ಈ ಸಂಖ್ಯೆ 75ಕ್ಕೆ ತಲುಪುವ ನಿರೀಕ್ಷೆಯಿದೆ. "ಹಿಂದಿನಂತೆ ಮೂರನೇ ವ್ಯಕ್ತಿ ಪಾಲುದಾರರನ್ನು ಅವಲಂಬಿಸುವ ಬದಲಾಗಿ, ಅಭಿವೃದ್ಧಿಯನ್ನು ಆಂತರಿಕವಾಗಿ ನಡೆಸುವ ಮೂಲಕ ದಕ್ಷತೆ, ಸಂವಹನ ಹಾಗೂ ನಾವೀನ್ಯತೆಯನ್ನು ಹೆಚ್ಚಿಸುತ್ತಿದ್ದೇವೆ. ಇದು ಗ್ರಾಹಕರಿಗೆ ಉತ್ತಮ ಉತ್ಪನ್ನಗಳನ್ನು ವೇಗವಾಗಿ ತಲುಪಿಸಲು ನೆರವಾಗಲಿದೆ," ಎಂದು ಅವರು ಒತ್ತಿ ಹೇಳಿದರು.

ಭಾರತವು ವೃತ್ತಿಪರ ಆಡಿಯೋ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವುದನ್ನು ಅವರು ಸೂಚಿಸಿದರು. ಕ್ರೀಡಾಂಗಣಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಪ್ರಮುಖ ಮೂಲಸೌಕರ್ಯಗಳಲ್ಲಿ ಬೋಸ್ ಉತ್ಪನ್ನಗಳ ಸ್ಥಾಪನೆಗಳು ನಡೆಯುತ್ತಿದ್ದು, ಪ್ರೀಮಿಯಂ ಗುಣಮಟ್ಟವನ್ನು ಉಳಿಸಿಕೊಂಡು ಕೈಗೆಟುಕುವ ಆಲ್-ಇನ್-ಒನ್ ಪ್ಯಾಕೇಜ್‌ಗಳನ್ನು ನೀಡುವ ದಾರಿಯನ್ನು ಕಂಪೆನಿ ಪರಿಶೀಲಿಸುತ್ತಿದೆ.

ಬೋಸ್ ಇಂಡಿಯಾದ ಈ ಹೆಜ್ಜೆಯನ್ನು ಕರ್ನಾಟಕ ಸರ್ಕಾರ ಸ್ವಾಗತಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಮಂಗಳೂರಿನಲ್ಲಿ ಬೋಸ್‌ನ R&D ಕೇಂದ್ರ ಸ್ಥಾಪನೆಯು ನಗರದ ನಾವೀನ್ಯತೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಇದು ನಮ್ಮ #BeyondBengaluru ಯೋಜನೆಗೆ ಪೂರಕವಾದ ಮಹತ್ವ ಬೆಳವಣಿಗೆ. ಮಂಗಳೂರಿನಲ್ಲಿ 20 ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು, 80,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 15,000 ಐಟಿ ವೃತ್ತಿಪರರು, ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ ಹಾಗೂ ಕೋ-ವರ್ಕಿಂಗ್ ಹಬ್‌ ಗಳಿರುವ ಬಲವಾದ ನೆಲೆಯಿದೆ" ಎಂದು ಹೇಳಿದರು.

4.5 ಲಕ್ಷ ಚದರ ಅಡಿ ವಿಸ್ತೀರ್ಣದ ಐಟಿ ಪಾರ್ಕ್‌ಗಳು ನಿರ್ಮಾಣ ಹಂತದಲ್ಲಿದ್ದು, BASF ನಂತಹ ಜಾಗತಿಕ ಹೆಸರುಗಳಿಂದ ಹಿಡಿದು ಇನ್ಫೋಸಿಸ್‌ನಂತಹ ಸ್ಥಳೀಯ ಚಾಂಪಿಯನ್‌ಗಳವರೆಗೆ ಮಂಗಳೂರು ತಂತ್ರಜ್ಞಾನ ಕ್ಲಸ್ಟರ್ ಆಗಿ ಹೊರಹೊಮ್ಮುತ್ತಿದೆ. "ಭಾರತದ ಸಿಲಿಕಾನ್ ಬೀಚ್ ಎಂದು ಗುರುತಿಸಲ್ಪಟ್ಟಿರುವ ಮಂಗಳೂರು, ಉದ್ಯಮಗಳನ್ನು ಸ್ಥಾಪಿಸಲು, ಆವಿಷ್ಕರಿಸಲು ಮತ್ತು ವಿಸ್ತರಿಸಲು ವಿಶ್ವಾಸಾರ್ಹ ತಾಣವಾಗಿದೆ" ಎಂದು ಖರ್ಗೆ ಉಲ್ಲೇಖಿಸಿದ್ದಾರೆ.

ಮಂಗಳೂರು ಕೇಂದ್ರವು ಮುಂದಿನ ಪೀಳಿಗೆಯ ಬೋಸ್ ಉತ್ಪನ್ನಗಳಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಗಳನ್ನು ತರಲು ಪ್ರಮುಖ ಪಾತ್ರವಹಿಸಲಿದೆ. ಇದು ನಗರವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಇನ್ನಷ್ಟು ಪ್ರಬಲವಾಗಿ ಗುರುತಿಸಲು ಸಹಾಯಮಾಡಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News