ಕೇಂದ್ರ ಸರಕಾರ ಇಸ್ರೇಲ್‌ಗೆ ಬೆಂಬಲ ಸೂಚಿಸುವುದನ್ನು ನಿಲ್ಲಿಸಲಿ : ಜ್ಯೋತಿ ಅನಂತಸುಬ್ಬರಾವ್
ಬೆಂಗಳೂರು; ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ಖಂಡಿಸಿ ಪ್ರತಿಭಟನೆ
ಬೆಂಗಳೂರು, ಸೆ.26: ಮೋದಿ ಅಧಿಕಾರಕ್ಕೆ ಬಂದ ನಂತರ ಫೆಲೆಸ್ತೀನ್ ವಿಚಾರದಲ್ಲಿ ದೇಶದ ನಿಲುವು ಬದಲಾಗಿ ಸಂಪೂರ್ಣ ಇಸ್ರೇಲ್ ಪರವಾಗಿದೆ. ಇಸ್ರೇಲ್‌ನ ಝಿಯೋನಿಸಂ, ಹಿಂದುತ್ವ ಎರಡೂ ಒಂದೇ ರೀತಿಯಲ್ಲಿದೆ. ಕೇಂದ್ರ ಸರಕಾರ ಇಸ್ರೇಲ್‌ಗೆ ಬೆಂಬಲ ಸೂಚಿಸುವುದನ್ನು ನಿಲ್ಲಿಸಬೇಕು ಎಂದು ಮಹಿಳಾ ಹೋರಾಟಗಾರ್ತಿ ಜ್ಯೋತಿ ಅನಂತ ಸುಬ್ಬರಾವ್ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ)ವತಿಯಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಅಮಾನವೀಯ ಕ್ರೌರ್ಯವನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫೆಲೆಸ್ತೀನ್ ದೇಶವನ್ನು ಅದರ ಹೆಸರು, ಚರಿತ್ರೆ, ಸಂಸ್ಕೃತಿ, ಜನರ ಜೀವನವನ್ನು ಚರಿತ್ರೆಯಲ್ಲಿ ಇನ್ನಿಲ್ಲದಂತೆ ಮಾಡಬೇಕೆನ್ನುವ ಕೆಲಸವನ್ನು ಇಸ್ರೇಲ್ ಮಾಡುತ್ತಿದೆ. ಇದು ಬಂಡವಾಳಶಾಹಿಗಳು ನಡೆಸುತ್ತಿರುವ ಕುತಂತ್ರ ಮತ್ತು ಭೂಮಿ ಕಸಿದು ಕೊಳ್ಳುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಹೋರಾಟಗಾರ ಕೆ.ವಿ.ಭಟ್ ಮಾತನಾಡಿ, ಇಸ್ರೇಲ್-ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಘೋಷಣೆ ಮಾಡಿದರೂ, ಅದನ್ನು ಲೆಕ್ಕಿಸದೇ ಇಸ್ರೇಲ್ ತನ್ನ ನರಹತ್ಯೆಯನ್ನು ಪುನಃ ಪ್ರಾರಂಭಿಸಿದೆ. ಫೆಲೆಸ್ತೀನಿನ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಪ್ರಜ್ಞಾವಂತರಾದ ನಾಗರಿಕರು ಖಂಡಿಸುತ್ತಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಇಸ್ರೇಲ್‌ಗೆ ಬೆಂಬಲ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ವಕೀಲರಾದ ವಿನಯ್ ಶ್ರೀನಿವಾಸ್, ಐಶ್ವರ್ಯ, ಹೋರಾಟಗಾರರಾದ ಗೀತಾ, ಆಫೀಫಾ, ಹಯ್ಯಾನ್, ಮುಹಮ್ಮದ್ ಪೀರ್, ದಿಶಾ ರವಿ, ಹಲವರು ಭಾಗವಹಿಸಿದ್ದರು.
ಇಸ್ರೇಲ್, 55 ಸಾವಿರಕ್ಕೂ ಹೆಚ್ಚು ಫೆಲೆಸ್ತೀನ್ ಜನರನ್ನು ಕೊಂದುಹಾಕಿದೆ. ಅದರಲ್ಲಿ ಶೇ.60ಕ್ಕೂ ಹೆಚ್ಚು ಜನ ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. ಇದು ಯುದ್ಧವಲ್ಲ, ವರ್ಣ ಭೇದದ ಜನಾಂಗೀಯ ಹತ್ಯೆ. ಮೋದಿ ಸರಕಾರ ಇಸ್ರೇಲ್‌ಗೆ ಬೆಂಬಲ ನೀಡುವುದನ್ನು ಖಂಡಿಸುತ್ತೇವೆ. ಫೆಲೆಸ್ತೀನ್ ಪರವಾಗಿದ್ದು, ವಿಮೋಚನಾ ಹೋರಾಟಕ್ಕೆ ಬೆಂಬಲ ನೀಡಬೇಕು. ಮುಸ್ಲಿಮ್ ದೇಶ ಎಂದು ನೋಡದೇ, ನಾವು ಮಾನವೀಯ ದೃಷ್ಟಿಯಿಂದ ಕಾಣಬೇಕು.
-ಜ್ಯೋತಿ ಅನಂತಸುಬ್ಬರಾವ್, ಹೋರಾಟಗಾರ್ತಿ