×
Ad

ಬೆಂಗಳೂರು | ‘ಆಪರೇಷನ್ ಕಗಾರ್’ ಮಾನವ ಹಕ್ಕುಗಳ ಉಲ್ಲಂಘನೆ : ಐಶ್ವರ್ಯಾ

Update: 2025-10-11 23:51 IST

ಬೆಂಗಳೂರು, ಅ.11: ಛತ್ತೀಸ್‌ ಗಡದಲ್ಲಿ ಕೇಂದ್ರ ಸರಕಾರ 'ಆಪರೇಷನ್ ಕಗಾರ್' ಹೆಸರಿನಲ್ಲಿ ನಕ್ಸಲರ ಹಾಗೂ ಆದಿವಾಸಿಗಳ ಮೇಲೆ ನಡೆಸುತ್ತಿರುವ ಮಾರಣಹೋಮ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಕಾಯ್ದೆ ಮತ್ತು ಸ್ಥಳೀಯ ಜನಾಂಗಗಳ ಹಕ್ಕುಗಳ ಕುರಿತು ವಿಶ್ವಸಂಸ್ಥೆ ಘೋಷಣೆಯ ಉಲ್ಲಂಘನೆಯಾಗಿದೆ ಎಂದು ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್‌ (ಪಿಯುಸಿಎಲ್) ಐಶ್ವರ್ಯಾ ಹೇಳಿದ್ದಾರೆ.

ಶನಿವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಆದಿವಾಸಿಗಳ ಮೇಲಿನ ಯುದ್ಧ ವಿರೋಧಿ ಕರ್ನಾಟಕ ಜನತೆಯ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಪರೇಷನ್ ಕಗಾರ್ ಎಂಬುದು ಮಧ್ಯ ಭಾರತದ ಆದಿವಾಸಿಗಳ ಮತ್ತು ಖನಿಜ ಸಂಪತ್ತಿನ ಮೇಲೆ ಯುದ್ಧ ಮಾಡುವ ಯೋಜನೆಯಾಗಿದೆ ಎಂದರು.

ಛತ್ತೀಸ್‌ಗಡದ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳು ಆದಾನಿ ಗಣಿಗಾರಿಕಾ ಯೋಜನೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಯೋಜನೆಗಳು ಭಾರತದ ಅತ್ಯಂತ ದೊಡ್ಡ ನಿರಂತರ ಅರಣ್ಯ ಪ್ರದೇಶವನ್ನು ಅಪಾಯಕ್ಕೊಳಪಡಿಸುತ್ತವೆ. ದೇವನಹಳ್ಳಿಯಿಂದ ಬಿಡದಿವರೆಗೆ, ಹೊನ್ನಾವರದಿಂದ ನಾಗರಹೊಳೆ ವರೆಗೆ ಭೂಸ್ವಾಧೀನ, ಬಲವಂತದ ತೆರವು ಮತ್ತು ಪೊಲೀಸ್ ಬಲದ ಬಳಕೆ ಸಾಮಾನ್ಯ ಸಂಗತಿಯಾಗಿದೆ. ಜನರು ಮತ್ತು ಪ್ರಕೃತಿಯ ಹಿತಾಸಕ್ತಿಯನ್ನು ಲೆಕ್ಕಿಸದ ಕಾರ್ಪೊರೇಟ್ ದೋಚುವಿಕೆಯನ್ನು ವೇಗಗೊಳಿಸಲು ವಿಶೇಷ ಆರ್ಥಿಕ ವಲಯಗಳನ್ನು ಕಾನೂನು ರಹಿತ ದ್ವೀಪಗಳಂತೆ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.

ಹೋರಾಟದಲ್ಲಿ ಪ್ರಗತಿಪರ ಕಟ್ಟಡ ಕಾರ್ಮಿಕರ ಒಕ್ಕೂಟದ ಎಸ್.ಎಂ.ಮಾರಿ, ಸಿಪಿಐಎಂಎಲ್‌ ನಾಗರಾಜ್ ಪೂಜಾರ್, ಹೋರಾಟಗಾರರಾದ ಆರತ್ರಿಕಾ, ಸಂಜಯ್, ಲಾವಣ್ಯ, ಸಂಜನಾ, ರಮೇಶ್, ಅರಿಂದಮ್, ಸಂಜಯ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

'ಆದಿವಾಸಿಗಳ ಮೇಲಿನ ಯುದ್ಧ ನಿಲ್ಲಲಿ' :

ಈ ದೋಚುವ ಆಡಳಿತದ ಕಾಲದಲ್ಲಿ ಪ್ರಕೃತಿ ಮತ್ತು ಪ್ರಕೃತಿ ಸಂಪತ್ತಿನ ಬಗ್ಗೆ ನಿಜವಾದ ಕಾಳಜಿ ಇರುವವರನ್ನು 'ರಾಷ್ಟ್ರವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ' ಎಂದು ಗುರುತಿಸಲಾಗುತ್ತಿದೆ. ಬಸ್ತರ್‌ನಿಂದ ಮಣಿಪುರವರೆಗೆ, ಲಡಾಖ್‌ನಿಂದ ನಾಗರಹೊಳೆವರೆಗೆ, ನಾವು ಕಾರ್ಪೊರೇಟೀಕರಣ ವಿರೋಧಿಸುತ್ತೇವೆ. ಕೇಂದ್ರ ಸರಕಾರ ಕೂಡಲೇ ಅಪರೇಷನ್‌ ಕಗಾರ್ ನಿಲ್ಲಿಸಬೇಕು ಮತ್ತು ಆದಿವಾಸಿಗಳ ಮೇಲೆ ನಡೆಯುತ್ತಿರುವ ಯುದ್ಧವನ್ನು ಸ್ಥಗಿತಗೊಳಿಸಬೇಕು ಎಂದು ಐಶ್ವರ್ಯಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News