×
Ad

ಕೊಡಗಿನಲ್ಲಿ ಭಾರೀ ಮಳೆ | ರೆಡ್ ಅಲರ್ಟ್ ಘೋಷಣೆ, ಜೂ.26ರಂದು ಶಾಲೆ, ಅಂಗನವಾಡಿ, ಪದವಿ ಪೂರ್ವ ಕಾಲೇಜುಗಳಿಗೆ ರಜೆ

Update: 2025-06-25 22:12 IST

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮತ್ತೆ ಗಾಳಿ-ಮಳೆ ಬಿರುಸುಗೊಂಡಿದೆ. ಮಳೆಯೊಂದಿಗೆ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಜನರಲ್ಲಿ ಆತಂಕ ಮೂಡಿದೆ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜೂ.26 ರಂದು ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದು, ಮಳೆಯ ಪ್ರಮಾಣ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 7 ಇಂಚು, ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ 6 ಇಂಚು, ಮಡಿಕೇರಿ ತಾಲ್ಲೂಕಿನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ 5 ಇಂಚಿಗೂ ಅಧಿಕ ಮಳೆಯಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ 5 ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿದೆ.

ಭಾರೀ ಗಾಳಿಯಿಂದ ಗ್ರಾಮೀಣ ಭಾಗದಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿದೆ. ನದಿತೀರ, ಎತ್ತರ ಮತ್ತು ತಗ್ಗು ಪ್ರದೇಶಗಳಲ್ಲಿ ಆತಂಕದ ವಾತಾವರಣವಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಮಡಿಕೇರಿಯಲ್ಲಿ ಭಾರೀ ಗಾಳಿಯೊಂದಿಗೆ ಮೈಕೊರೆಯುವ ಚಳಿ ಇದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಶವ ಸಂಸ್ಕಾರಕ್ಕೆ ಪರದಾಟ :

ಕೊಡಗು ಜಿಲ್ಲೆಯಾದ್ಯಂತ ವ್ಯಾಪಕ ಗಾಳಿಮಳೆಯಾಗುತ್ತಿರುವುದರಿಂದ ಶವ ಸಂಸ್ಕಾರಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿ ಹರಿಯುವ ಬಲಮುರಿ ಗ್ರಾಮದ ಸ್ಮಶಾನದಲ್ಲಿ ಇಂದು ವ್ಯಕ್ತಿಯೊಬ್ಬರ ಮೃತದೇಹದ ಅಂತ್ಯ ಸಂಸ್ಕಾರದ ಸಂದರ್ಭ ಗುಂಡಿ ತೆಗೆದಷ್ಟು ನೀರು ಉಕ್ಕಿ ಬಂದು ಕುಟುಂಸ್ಥರು ಕಷ್ಟ ಅನುಭವಿಸುವಂತ್ತಾಯಿತು.

ಗ್ರಾಮದ ಕುಮಾರ (42) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಡೆಬಿಡದೆ ಸುರಿಯುತ್ತಿದ್ದ ಮಳೆಯ ನಡುವೆ ಗುಂಡಿ ತೋಡಿದಷ್ಟು ನೀರು ಉಕ್ಕಿ ಬರುತ್ತಿತ್ತು. ಬಕೇಟ್ ಗಳ ಮೂಲಕ ನೀರನ್ನು ಖಾಲಿ ಮಾಡುತ್ತಾ ಶವ ಸಂಸ್ಕಾರ ಮಾಡಲಾಯಿತು. ಆದರೂ ನೀರು ಉಕ್ಕಿ ಬರುತ್ತಿದ್ದುದರಿಂದ ನೆರೆದಿದ್ದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News