ಲೋಕಾಯುಕ್ತರ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಪ್ರಕರಣ: ನಿವೃತ್ತ ಹೆಡ್ ಕಾನ್‍ಸ್ಟೇಬಲ್‍ಗೆ ಜೂ.30ರ ವರೆಗೆ ನ್ಯಾಯಾಂಗ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ನೌಕರರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ನಿವೃತ್ತ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ನಿಂಗಪ್ಪನನ್ನು ಜೂನ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಲೋಕಾಯುಕ್ತ ನ್ಯಾಯಾಲಯ ಆದೇಶಿಸಿದೆ.
ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದರಿಂದ ಲೋಕಾಯುಕ್ತ ತನಿಖಾಧಿಕಾರಿಗಳು ಆರೋಪಿ ನಿಂಗಪ್ಪನನ್ನು ಜೂ.16ರ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಲೋಕಾಯುಕ್ತ ಪರ ವಿಶೇಷ ಸರಕಾರಿ ಅಭಿಯೋಜಕರು ವಾದ ಮಂಡಿಸಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಆರೋಪಿಯನ್ನು 14 ದಿನಗಳ ಕಾಲ(ಜೂನ್ 30) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಆರೋಪಿಯು ಅಬಕಾರಿ, ಬಿಬಿಎಂಪಿ, ಬಿಡಿಎ ಹಾಗೂ ಆರ್‍ಟಿಓ ಇಲಾಖೆಗಳಿಂದ ತಿಂಗಳಿಗೆ ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಆತನ ಬಳಿಯಿದ್ದ ಡೈರಿಯನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಯಾರಿಂದ ಎಷ್ಟು ಹಣ ವಸೂಲಿ ಮಾಡಿದ್ದ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಹಣ ನೀಡಿದ ಅಧಿಕಾರಿಗಳಿಗೂ ನಡುಕ ಶುರುವಾಗಿದ್ದು, ಶೀಘ್ರದಲ್ಲೇ ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಹೆಸರು ದುರ್ಬಳಕೆ ಮಾಡಿಕೊಂಡು ಸರಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ದಾಳಿ ಬೆದರಿಕೆವೊಡ್ಡಿ ಲಕ್ಷಾಂತರ ರೂಪಾಯಿ ವಸೂಲಿ ಸಂಬಂಧ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದ ತಂಡ ನಿವೃತ್ತ ಹೆಡ್‍ಕಾನ್‍ಸ್ಟೇಬಲ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿತ್ತು. ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಅಬಕಾರಿ, ಬಿಬಿಎಂಪಿ, ಬಿಡಿಎ ಹಾಗೂ ಆರ್‍ಟಿಓ ಇಲಾಖೆ ಅಧಿಕಾರಿಗಳ ಜೊತೆ ಕರೆ ಮಾಡಿದ ವಿವರ ಹಾಗೂ ವಾಟ್ಸಪ್‍ನಲ್ಲಿ ಮೆಸೇಜ್ ಮಾಡಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.