×
Ad

ತಯಾರಿಕೆ ವಲಯದಲ್ಲಿ 3.4 ಲಕ್ಷ ಕೋಟಿ ರೂ.ಹೂಡಿಕೆ ಪ್ರಕ್ರಿಯೆ : ಎಂ.ಬಿ. ಪಾಟೀಲ್

Update: 2025-07-05 19:42 IST

ಬೆಂಗಳೂರು : ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತಯಾರಿಕೆ ವಲಯಕ್ಕೆ ಖಾತ್ರಿಯಾಗಿದ್ದ ಒಟ್ಟು 5.56 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಪೈಕಿ ಈಗಾಗಲೇ 3.4 ಲಕ್ಷ ಕೋಟಿ ರೂ. ಹೂಡಿಕೆಯ ಹಲವು ಪ್ರಕ್ರಿಯೆಗಳು ನೈಜವಾಗಿ ನಡೆಯುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟವು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯೆಲ್ ಅವರೊಂದಿಗೆ ಏರ್ಪಡಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ವೈಮಾನಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕ್ರೋನ್ಸ್, ಸಾಫ್ರಾನ್, ಟಿಎಎಸ್‍ಎಲ್ ಮುಂತಾದ ಕಂಪನಿಗಳು ಈಗಾಗಲೇ ಹೂಡಿಕೆಯ ಭರವಸೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿವೆ. ಜೊತೆಗೆ ಇಂಡಿಗೋ ಮತ್ತು ಏರ್ ಇಂಡಿಯಾ ಕೂಡ ತಮ್ಮ ಎಂಆರ್‌ ಓ ಘಟಕಗಳನ್ನು ರಾಜ್ಯದಲ್ಲಿ ಆರಂಭಿಸಿವೆ. ಈ ಮೂಲಕ ಕರ್ನಾಟಕವು ದೇಶದ ಎಂಆರ್‌ ಓ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಅವರು ನುಡಿದಿದರು.

ಫೆಬ್ರವರಿಯಲ್ಲಿ ಜಾರಿಗೆ ತಂದ ರಾಜ್ಯದ ನೂತನ ಕೈಗಾರಿಕಾ ನೀತಿಯು ಉದ್ಯಮ ಸ್ನೇಹಿಯಾಗಿದೆ. ಇದರಲ್ಲಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಒತ್ತು ಕೊಡಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ರಾಜ್ಯವು ಪ್ರಾದೇಶಿಕ ಅಸಮತೋಲನ ನಿವಾರಣೆ, ಮಹಿಳೆಯರ ಉದ್ಯಮಶೀಲತೆ, ಉದ್ಯೋಗಸೃಷ್ಟಿ ಮತ್ತು ಆರ್ ಅಂಡ್ ಡಿ(ಸಂಶೋಧನೆ ಮತ್ತು ಅಭಿವೃದ್ಧಿ) ಇವುಗಳಿಗೆ ಆದ್ಯತೆ ನೀಡಿದೆ. ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆಗಳನ್ನು ಸಕಾರಾತ್ಮಕವಾಗಿ ಮುಂದಿನ ಹಂತಗಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ ಅಧ್ಯಕ್ಷ ಕಮಲ ಬಾಲಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಭಾರತೀಯ ಕೈಗಾರಿಕಾ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News