ಸಾರಿಗೆ ನೌಕರರ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಆ.5ಕ್ಕೆ ಮುಷ್ಕರ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ ನೀಡಬೇಕಿರುವ ಪರಿಷ್ಕೃತ ವೇತನದ 38 ತಿಂಗಳ ಹಿಂಬಾಕಿ ಮೊತ್ತವನ್ನು ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ವತಿಯಿಂದ ಆ.5ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಠಾವಧಿ ಸಾರಿಗೆ ಮುಷ್ಕರವನ್ನು ನಡೆಸಲಾಗುವುದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಸುರೇಶ್ ನಾಡಿಗೇರ್ ತಿಳಿಸಿದ್ದಾರೆ.
ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮಗಳ ಚಾಲಕ, ನಿರ್ವಾಹಕ ಮತ್ತು ತಾಂತ್ರಿಕ ಸಿಬ್ಬಂದಿಗಳ ಮೇಲೆ ಸುಳ್ಳು ಮೊಕದ್ದಮೆ ಜಾರಿ ಮಾಡಿ, ಕಾನೂನು ಬಾಹಿರ ಶಿಸ್ತುಕ್ರಮಗಳಾದ ಅಮಾನತ್ತು, ವರ್ಗಾವಣೆ ಮತ್ತು ಬಡ್ತಿ ತಡೆಹಿಡಿಯುವುದು ಹಾಗೂ ವಜಾಗೊಳಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಾಯುವ್ಯ ಸಾರಿಗೆಯಲ್ಲಿ ಜಾಹಿರಾತು ಅಧಿಸೂಚನೆಯ 2,814 ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಬೇಕು ಮತ್ತು ಚಾಲಕ ಹುದ್ದೆಯ ಅಭ್ಯರ್ಥಿಗಳನ್ನು ಚಾಲಕ ನಿರ್ವಾಹಕ ಹುದ್ದೆಗೆ ಪರಿಗಣಿಸಿ ಈ ಕೂಡಲೇ ನೇಮಕಾತಿ ಆದೇಶವನ್ನು ನೀಡಿಬೇಕು. ನಿವೃತ್ತಿದಾರರಿಗೆ ವೇತನ ಪರಿಷ್ಕರಣೆಯ ಹಾಗೂ ಇನ್ನಿತರ ಬಾಕಿ ಹಣ ನೀಡಬೇಕು. ನಾಲ್ಕು ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿರುವ ಚಾಲಕ, ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಯನ್ನು ಈ ಕೂಡಲೇ ರದ್ದುಗೊಳಿಸಬೇಕು ಎಂದು ಸುರೇಶ್ ನಾಡಿಗೇರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಗಂಗಾಧರ ಕೆ.ಗಾಣಿಗೇರ, ಬಿಎಂಟಿಸಿ ಮಜ್ದೂರ್ ಸಂಘದ ಅಧ್ಯಕ್ಷ ಮಾದಯ್ಯ, ಸದಸ್ಯರಾದ ಸಿದ್ಧರಾಮಾರಾಧ್ಯ, ನಿತ್ಯಾನಂದ ಪೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.