ಬೆಂಗಳೂರು | ಗೋದಾಮಿನ ಮೇಲೆ ಸಿಸಿಬಿ ದಾಳಿ: 61.82 ಲಕ್ಷ ರೂ. ಮೌಲ್ಯದ ನಿಷೇಧಿತ ತಂಬಾಕು ವಶ
ಬೆಂಗಳೂರು : ಗೋದಾಮಿನ ಮೇಲೆ ದಾಳಿ ನಡೆಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಸುಮಾರು 61.82 ಲಕ್ಷ ರೂ. ಮೌಲ್ಯದ ನಿಷೇಧಿತ ತಂಬಾಕು/ನಿಕೋಟಿನ್ ಪದಾರ್ಥಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ನಗರದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲಿ ಗೋದಾಮಿನಲ್ಲಿ ನಿಷೇಧಿತ ತಂಬಾಕು, ನಿಕೋಟಿನ್ ಒಳಗೊಂಡ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಸಿಸಿಬಿ ಮಹಿಳಾ ಅಧಿಕಾರಿಗಳು, ಸ್ಥಳದ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅವರ ಬಳಿ ಯಾವುದೇ ಪರವಾನಗಿ ಇರಲಿಲ್ಲ ಎನ್ನುವುದು ತಿಳಿದು ಬಂದಿದೆ.
ಗಣೇಶ್ 701 ಟೊಬ್ಯಾಕೊ ಪ್ಯಾಕೆಟ್‍ಗಳಿರುವ 155 ಚೀಲಗಳು, ಕೂಲ್‍ಲಿಪ್ ಟೊಬ್ಯಾಕೊ ಇರುವ 160 ಚೀಲಗಳು, ಎಸ್.ಜಿ.ಟಿ-1 ಟೊಬ್ಯಾಕೊ ಇರುವ 60 ಬಾಕ್ಸ್ ಗಳು ಹಾಗೂ ಸ್ವಾಗತ್ ಪಾನ್ ಮಸಾಲಾ ಇರುವ 60 ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ, ತಂಬಾಕು/ನಿಕೋಟಿನ್ ಪದಾರ್ಥಗಳ ಸಾಗಣೆಗೆ ಬಳಸಲಾಗುತ್ತಿದ್ದ ಒಂದು ಗೂಡ್ಸ್ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.