×
Ad

‘ಮೀಸಲಾತಿ ನಿಯಮ ಉಲ್ಲಂಘನೆ’ | ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ವಿವಿಯ 67 ದಲಿತ ಪ್ರಾಧ್ಯಾಪಕರಿಂದ ಕುಲಪತಿಗೆ ಪತ್ರ

Update: 2025-07-06 19:41 IST

ಬೆಂಗಳೂರು : ಮೀಸಲಾತಿ ನಿಯಮ ಉಲ್ಲಂಘಿಸಿ ರಾಜ್ಯದ ವಿವಿಧ ವಿವಿಗಳಿಂದ ಬೆಂಗಳೂರು ವಿವಿಗೆ ಹುದ್ದೆ ರಹಿತವಾಗಿ ಹಲವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಲಪತಿ ಡಾ.ಜಯಕರ ಎಸ್.ಎಂ ಅವರು 15 ದಿನಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬೆಂವಿವಿಯ 67 ದಲಿತ ಪ್ರಾಧ್ಯಾಪಕರು ಪತ್ರ ಬರೆದಿದ್ದಾರೆ.

ಪ್ರಾಧ್ಯಾಪಕರಾದ ಡಾ.ಎಂ.ಶಶಿಧರ್, ಪ್ರೊ.ಮುರಳೀಧರ ಬಿ.ಎಲ್., ಪ್ರೊ.ಆರ್.ಲಕ್ಷ್ಮೀನಾರಾಯಣ, ಡಾ.ಲಕ್ಷ್ಮೀಶ ಟಿ.ಆರ್., ಪ್ರೊ.ಡಿ.ಸಿ.ಮೋಹನ, ಡಾ.ಟಿ.ಜಿ.ಉಮೇಶ, ಡಾ.ವಾಣೀಶ್ರೀ ಕೊಪ್ಪದ, ಡಾ.ಮಂಜುನಾಥ ಎಚ್., ಡಾ.ಸುರೇಶ್ ಆರ್., ಡಾ.ಎಸ್.ನಾಗರತ್ನಮ್ಮಾ, ಡಾ.ವೀಣಾದೇವಿ, ಡಾ.ಆರ್.ಗೀತಾ, ಡಾ.ಎಸ್.ವೈ.ಸುರೇಂದ್ರ ಕುಮಾರ್, ಡಾ.ರಾಘವೇಂದ್ರ ಎಚ್.ಕೆ., ಡಾ.ಡಿ.ಕೆ.ಪ್ರಭಾಕರ್, ಡಾ.ರೇಣುಕಾ ಸಿ.ಜಿ., ಡಾ.ಶಿವಣ್ಣ ಎಸ್, ಪ್ರೊ.ಪಿ.ಸಿ.ನಾಗೇಶ್, ಪ್ರೊ.ಕೃಷ್ಣಸ್ವಾಮಿ, ಡಾ.ಕೆ.ರಾಮಕೃಷ್ಣಯ್ಯ, ಡಾ.ಜಿ.ಕೃಷ್ಣಮೂರ್ತಿ ಸೇರಿದಂತೆ 67 ಪ್ರಾಧ್ಯಾಪಕರು ಪತ್ರದಲ್ಲಿ ಸಹಿ ಹಾಕಿದ್ದಾರೆ.

ಬೆಂಗಳೂರು ವಿವಿ ಶಿಕ್ಷಕರ ಪರಿಷತ್ತು ಬೇರೆ ವಿಶ್ವ ವಿದ್ಯಾಲಯಗಳಿಂದ ಶಿಕ್ಷಕರನ್ನು ವರ್ಗಾವಣೆ ಮಾಡಿಕೊಂಡಿರುವುದರಿಂದ ಇಲ್ಲಿಯೇ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಪೋಸ್ಟ್ ರಹಿತವಾಗಿ ಶಿಕ್ಷಕರನ್ನು ವರ್ಗಾಯಿಸಿಕೊಂಡರೆ ಬೆಂವಿವಿಗೆ ಮುಂದಿನ ದಿನಗಳಲ್ಲಿ ನೇಮಕಾತಿಗೆ ತೊಂದರೆಯಾಗುತ್ತದೆ. ವರ್ಗಾವಣೆಯಾದ ಶಿಕ್ಷಕರಲ್ಲಿ ಯಾರೊಬ್ಬರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿಲ್ಲ ಎಂದು ತಿಳಿಸಿದ್ದಾರೆ.

ಈವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಯಾವ ರೋಸ್ಟರ್ ಬಿಂದುಗೆ ಸೇರಿಸಲಾಗಿದೆ ಎಂಬುದನ್ನು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿಲ್ಲ. ಇದು ಸರಕಾರದ ಮೀಸಲಾತಿ ನೀತಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೇ ಬೆಂವಿವಿಯಲ್ಲಿ ಖಾಲಿಯಿರುವ 22 ಶಿಕ್ಷಕರ ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಲು ವಿವಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಹುಸಂಖ್ಯಾತ ದಲಿತರಿರುವ ವಿವಿಯಲ್ಲಿ ದಲಿತರ ಮಾನ್ಯತೆಯನ್ನು ಕುಗ್ಗಿಸಲು, ರೋಸ್ಟರ್ ಪದ್ಧತಿಯನ್ನು ಧಿಕ್ಕರಿಸಿ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ವಿವಿಯ ಈ ಕ್ರಮವನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದುದರಿಂದ ತಾವು ಈ ಕೂಡಲೇ ವಿವಿಯಲ್ಲಿ ಉಳಿದ ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಲು ಕ್ರಮಕೈಗೊಳ್ಳಬೇಕು. ವಿವಿಗೆ ವರ್ಗಾವಣೆಗೊಂಡ ಶಿಕ್ಷಕರ ಸೇವಾ ಹಿರಿತನ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ರೊಸ್ಟರ್ ಅನುಪಾತವನ್ನು ನಿರ್ಧರಿಸಿ ಕೂಡಲೇ ಆದೇಶ ಹೊರಡಿಸಬೇಕು. ತಪ್ಪಿದ್ದಲ್ಲಿ ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News