ಅತ್ಯಾಚಾರ ಆರೋಪ ಪ್ರಕರಣ | ಪ್ರಜ್ವಲ್ ರೇವಣ್ಣಗೆ ಜು.8ರವರೆಗೆ ನ್ಯಾಯಾಂಗ ಬಂಧನ
ಬೆಂಗಳೂರು : ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜು.8ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
ಜೂ.29ಕ್ಕೆ ಪ್ರಜ್ವಲ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಪ್ರಜ್ವಲ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಚಿಕಿತ್ಸೆ ಅಗತ್ಯವಿದೆ, ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕೆಂದು ಪ್ರಜ್ವಲ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ನ್ಯಾಯಾಲಯ ಸೂಚನೆ ನೀಡಿತು.
ನ್ಯಾಯಾಲಯ ಸೂಚನೆಯಂತೆ ಮನವಿ ಪತ್ರವನ್ನು ಸಿದ್ಧಪಡಿಸಿ ಪ್ರಜ್ವಲ್ ರೇವಣ್ಣಗೆ ವಕೀಲ ಅರುಣ್ ನೀಡಿದ್ದು, ಜೈಲಿಗೆ ಹೋದಾಗ ಅಧಿಕಾರಿಗಳಿಗೆ ನೀಡುವಂತೆ ಸೂಚಿಸಿದ್ದಾರೆ. ಜೈಲು ಅಧಿಕಾರಿಗಳು ಅವಕಾಶ ನೀಡಿದ್ದಲ್ಲಿ ಅರ್ಜಿ ವಿಚಾರಣೆ ನಡೆಸುತ್ತೇವೆ. ಸೋಮವಾರ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ
ಲೈಂಗಿಕ ದೌರ್ಜನ್ಯ ಪ್ರಕರಣ, ಮಹಿಳೆಯ ಅಪಹರಣ ಪ್ರಕರಣಗಳಲ್ಲಿ ಬಂಧನವಾಗಿದ್ದ ಪ್ರಜ್ವಲ್‍ರನ್ನು ಎಸ್‍ಐಟಿ ಕಸ್ಟಡಿಗೆ ಪಡೆದಿತ್ತು. ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆ ಶನಿವಾರ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ವಿಚಾರಣೆ ಮುಗಿದಿರುವ ಕಾರಣಕ್ಕೆ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಹೀಗಾಗಿ ಪ್ರಜ್ವಲ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು.
ಈಗಾಗಲೇ ಮೂರು ಪ್ರಕರಣಗಳನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ 4ನೇ ಪ್ರಕರಣ ದಾಖಲಾದಂತಾಗಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆ ಅತ್ಯಾಚಾರ ಆರೋಪ ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದ ತನಿಖೆಗಾಗಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ ಎಸ್‍ಐಟಿ ಅಧಿಕಾರಿಗಳು, 4 ದಿನ ಕಸ್ಟಡಿಗೆ ಪಡೆದಿದ್ದರು. ಜೂ.29ರವರೆಗೆ ಪ್ರಜ್ವಲ್‍ರನ್ನು ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ಕೋರ್ಟ್ ಆದೇಶಿಸಿತ್ತು. ಸದ್ಯ ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.