ಬೆಂಗಳೂರು | ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ; 9 ಇಲೆಕ್ಟ್ರಿಕ್ ಬೈಕ್‌ಗಳು ಭಸ್ಮ
ಬೆಂಗಳೂರು, ಅ.2: ಯಲಚೇನಹಳ್ಳಿಯಲ್ಲಿನ ಕನಕಪುರ ರಸ್ತೆ ಮೆಟ್ರೊ ನಿಲ್ದಾಣದ ಸಮೀಪ ಇರುವ ವಾಣಿಜ್ಯ ಕಟ್ಟಡವೊಂದರಲ್ಲಿ ಗುರುವಾರ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಮಾರು 19 ಇಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಯಲಚೇನಹಳ್ಳಿಯ ಡೋಮಿನೋಸ್ ಪಿಝ್ಝಾ ಕಟ್ಟಡದ ನೆಲಮಹಡಿಯಲ್ಲಿ ಸ್ಥಾಪಿಸಲಾಗಿದ್ದ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರಂಭಿಕ ವರದಿಗಳ ಪ್ರಕಾರ, ಚಾರ್ಜಿಂಗ್ ಸಮಯದಲ್ಲಿ ಓವರ್‌ಹೀಟ್‌ನಿಂದಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಹತ್ತಿಕೊಂಡ ಬೆಂಕಿಯು ಪಾರ್ಕಿಂಗ್ ಪ್ರದೇಶದಲ್ಲಿದ್ದ ಗ್ಯಾಸ್ ಲೈನ್‌ಗೆ ವ್ಯಾಪಿಸಿತು. ಈ ಸಂದರ್ಭದಲ್ಲಿ ಒಂದು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಯಿತು. ಪರಿಣಾಮವಾಗಿ, ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ 19 ಇಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣ ನಾಶವಾಗಿವೆ. ಇದಲ್ಲದೆ, ಬೆಂಕಿಯ ಶಾಖದಿಂದಾಗಿ ಇನ್ನುಳಿದ ಆರು ಗ್ಯಾಸ್ ಸಿಲಿಂಡರ್‌ಗಳಲ್ಲಿ ಸೋರಿಕೆ ಕಾಣಿಸಿಕೊಂಡಿತ್ತು. ಸ್ಥಳೀಯ ನಿವಾಸಿಗಳು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಮತ್ತಷ್ಟು ದೊಡ್ಡ ಅನಾಹುತವಾಗುವುದು ತಪ್ಪಿದೆ.
ಈ ಘಟನೆಯು ಕೆ.ಎಸ್. ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಮುಂದುವರಿದಿದೆ.