ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ : ಬಿ.ವೈ.ವಿಜಯೇಂದ್ರ
ಬೆಂಗಳೂರು, ಆ.25: ಧರ್ಮಸ್ಥಳ ಕುರಿತ ಸಂಪೂರ್ಣ ತನಿಖೆಯನ್ನು ಕೂಡಲೇ ಎನ್‍ಐಎಗೆ ವಹಿಸುವಂತೆ ಆಗ್ರಹಿಸಿ ಸೆ.1ರಂದು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದು, ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮ ಜಾಗೃತಿ ಮೂಡಿಸುವ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡುವ ಬೃಹತ್ ಸಮಾವೇಶ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಟ್ಯಂತರ ಸದ್ಭಕ್ತರು, ಹಿಂದೂಗಳ ಪರವಾಗಿ ಮುಖ್ಯಮಂತ್ರಿಯನ್ನು ನಾವು ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.
ಎನ್‍ಐಎ ತನಿಖೆ ಮಾಡಿದರೆ ರಾಜ್ಯ ಸರಕಾರದ ಬಗ್ಗೆ ಜನರಿಗೆ ಮತ್ತು ಅಪಾರ ಭಕ್ತರಿಗೆ ವಿಶ್ವಾಸ ಬರಲಿದೆ. ಆದುದರಿಂದ, ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಈ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಹಿಂದೂ ಭಾವನೆಗೆ ಧಕ್ಕೆ ತಂದ ಸರಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಎನ್‍ಐಎ ತನಿಖೆಯ ಆಗ್ರಹದ ಬೇಡಿಕೆ ಮುಂದಿಟ್ಟು ರಾಜ್ಯದ ಸಮಸ್ತ ಹಿಂದೂ ಸಮಾಜವು ಇದರಲ್ಲಿ ಪಾಲ್ಗೊಳ್ಳಬೇಕು. ಸೆ.1ರಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಮಾಡಲಿದ್ದೇವೆ. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ, ಎಲ್ಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಧರ್ಮಸ್ಥಳಕ್ಕೆ ಬರಲಿದ್ದಾರೆ. ಲಕ್ಷಾಂತರ ಜನರು ಭಾಗವಹಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಧರ್ಮಸ್ಥಳದ ಘಟನೆಯಿಂದ ಸರಕಾರಕ್ಕೆ ಕಳಂಕ ಬಂದಿದೆ. ಆ ಕಳಂಕದಿಂದ ಹೊರಗೆ ಬರಬೇಕಿದೆ. ಈ ದುಷ್ಕೃತ್ಯದ ಹಿಂದೆ ಇರುವ ಸಂಘಟನೆಗಳು, ದುಷ್ಟ ಶಕ್ತಿಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಿದೆ. ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳು ಇದೇ ರೀತಿ ಇನ್ನೊಂದು ಹಿಂದೂ ದೇವಾಲಯದ ವಿರುದ್ಧ ಷಡ್ಯಂತ್ರ ಮಾಡಬಹುದು ಎಂದು ವಿಜಯೇಂದ್ರ ತಿಳಿಸಿದರು.
ಧರ್ಮಸ್ಥಳ ಪವಿತ್ರ ಶ್ರೀ ಕ್ಷೇತ್ರದ ಕುರಿತು ದಾರಿಯಲ್ಲಿ ಹೋಗುವ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಹೊಡೆದರೆ ಆ ವ್ಯಕ್ತಿಯ ಹಿನ್ನೆಲೆ ಏನು? ಅವನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ಸಂಗ್ರಹಿಸಬೇಕಿತ್ತು. ಅಥವಾ ಬೇಹುಗಾರಿಕಾ ದಳದಿಂದ ವರದಿ ಪಡೆದು ಮುಖ್ಯಮಂತ್ರಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ಅವರು ನುಡಿದರು.
ಧರ್ಮಸ್ಥಳದ ವಿಷಯದಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯ, ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ಸದ್ದು ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ? ಧರ್ಮಸ್ಥಳ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿಯ ಬಗ್ಗೆ ಎಷ್ಟು ಶ್ರದ್ಧೆ ಇದೆ? ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಕೆ.ಗೋಪಾಲಯ್ಯ, ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ ಭಾಗವಹಿಸಿದ್ದರು.