ಸೆ.1ರಿಂದ ಅ.1ರ ವರೆಗೆ ʼಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ
ಬೆಂಗಳೂರು : ರಾಜ್ಯ ಸರಕಾರವು ಬಸವಣ್ಣ ಅವರನ್ನು `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1ರ ವರೆಗೆ ಒಂದು ತಿಂಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ `ಬಸವ ಸಂಸ್ಕೃತಿ ಅಭಿಯಾನ’ ನಡೆಸಲು ತೀರ್ಮಾನಿಸಿದೆ.
ಶನಿವಾರ ಈ ಸಂಬಂಧವಾಗಿ ಒಕ್ಕೂಟದಲ್ಲಿರುವ ಸ್ವಾಮೀಜಿಗಳು ಲಿಂಗಾಯತ ಮುಖಂಡ ಮತ್ತು ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಸದಾಶಿವನಗರದ ಮನೆಯಲ್ಲಿ ಚರ್ಚೆ ನಡೆಸಿದ್ದಾರೆ. ಒಕ್ಕೂಟದ ಪರವಾಗಿ ಭಾಲ್ಕಿ ಮಠದ ಶ್ರೀಬಸವಲಿಂಗ ಪಟ್ಟದ್ದೇವರು, ಅಥಣಿಯ ಶ್ರೀಚೆನ್ನಬಸವ ಸ್ವಾಮೀಜಿ, ನೆಲಮಂಗಲದ ಪವಾಡ ಶ್ರೀಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಗೊರವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ನಿಜಗುಣ ಮಠದ ಇಮ್ಮಡಿ ನಿಜಗುಣ ಶ್ರೀಗಳು, ಬಸವ ಧರ್ಮಪೀಠದ ಬಸವಯೋಗಿ ಸ್ವಾಮೀಜಿ, ಚನ್ನಪಟ್ಟಣದ ಬೇಗೂರು ಮಠದ ಮೃತ್ಯುಂಜಯ ಸ್ವಾಮೀಜಿ ಸಚಿವರ ನಿವಾಸಕ್ಕೆ ಆಗಮಿಸಿದ್ದರು.
ಬಳಿಕ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಈ ಅಭಿಯಾನವು ಬಸವಣ್ಣನ ಜನ್ಮಸ್ಥಳವಾದ ಬಸವನ ಬಾಗೇವಾಡಿಯಲ್ಲಿ ಸೆ.1ರಂದು ಚಾಲನೆ ಕಾಣಲಿದೆ. ಬಸವರಥವು ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಅ.1ರಂದು ಬೆಂಗಳೂರನ್ನು ತಲುಪಲಿದೆ. ಅ.5ರಂದು ಲಕ್ಷಾಂತರ ಲಿಂಗಾಯತ ಅನುಯಾಯಿಗಳನ್ನು ಸೇರಿಸಿ, ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲಾಗುವುದು. ಇಲ್ಲಿ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಆದರೆ, ಸಮಾರೋಪದ ಸ್ಥಳವಿನ್ನೂ ನಿಗದಿಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾಲಾವಕಾಶ ನೋಡಿಕೊಂಡು ಇದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಅಭಿಯಾನದಲ್ಲಿ ಪ್ರತಿದಿನವೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜತೆ ಸಂವಾದ, ಸಂಜೆ ಪಾದಯಾತ್ರೆ, ವಚನ ಸಂಗೀತ, ಸ್ವಾಮೀಜಿಗಳು ಮತ್ತು ಆಹ್ವಾನಿತ ಉಪನ್ಯಾಸಕರ ಭಾಷಣ, ರಾತ್ರಿಹೊತ್ತು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಬರೆದಿರುವ `ಜಂಗಮ ದೆಡೆಗೆ’ ನಾಟಕ ಪ್ರದರ್ಶನ ನಡೆಯಲಿವೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕದಳಿ ಮಹಿಳಾ ವೇದಿಕೆ ಮುಂತಾದ ಬಸವಪರ ಸಂಘಟನೆಗಳು ಕೈಜೋಡಿಸಿವೆ ಎಂದು ಒಕ್ಕೂಟದ ಅಧ್ಯಕ್ಷ ಶ್ರೀ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.