ಡಿ.ಕೆ.ಶಿವಕುಮಾರ್ ಓಡಿಸಿದ್ದ ಸ್ಕೂಟರ್ ಮೇಲಿನ 18,500 ದಂಡ ಬಾಕಿ ವಸೂಲಿ
ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಬಳಸಿದ್ದ ವಾಹನ
ಬೆಂಗಳೂರು : ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಓಡಿಸಿದ್ದ ದ್ವಿಚಕ್ರ ವಾಹನದ ಮೇಲೆ ಮಾಲೀಕನಿಂದ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಾಖಲಾಗಿದ್ದ 34 ಪ್ರಕರಣಗಳಲ್ಲಿ 18,500 ರೂ. ದಂಡವನ್ನು ಪೊಲೀಸರು ಬುಧವಾರ ವಸೂಲಿ ಮಾಡಿದ್ದಾರೆ.
ಬಿಡಿಎ ವತಿಯಿಂದ ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಲು ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಬಂದಿದ್ದರು. ಖುದ್ದು ಸ್ಕೂಟರ್ ಚಲಾಯಿಸಿಕೊಂಡು ಅವರು ಸೇತುವೆ ಪರಿಶೀಲನೆ ಮಾಡಿದ್ದರು. ಈ ಸ್ಕೂಟರ್‌ನ ನೋಂದಣಿ ಸಂಖ್ಯೆ ಆಧರಿಸಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ವಿಪಕ್ಷ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗ ಪರಿಶೀಲಿಸಿದೆ. ಆಗ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಆ ಸ್ಕೂಟರ್‌ನ ಮೇಲೆ 18,500 ರೂ. ದಂಡ ಬಾಕಿ ಇರುವುದು ಗೊತ್ತಾಗಿದೆ.
ಡಿಕೆಶಿ ಚಾಲನೆ ಮಾಡಿದ ದ್ವಿಚಕ್ರ ವಾಹನ ಸಂಚಾರ ನಿಯಮ ಉಲ್ಲಂಘಿಸಿದೆ : ಜೆಡಿಎಸ್
‘ರೀಲ್ಸ್ ರಾಜಾ ಮಿಸ್ಟರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೆಬ್ಬಾಳ ಫ್ಲೈಓವರ್ ಮೇಲೆ ಚಾಲನೆ ಮಾಡಿದ ದ್ವಿಚಕ್ರವಾಹನ 34ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆ. ದಂಡದ ಮೊತ್ತ 18,500 ರೂ.ಬಾಕಿ ಇದೆ’ ಎಂದು ಉಲ್ಲೇಖಿಸಿ ಜೆಡಿಎಸ್ ಟೀಕಿಸಿತ್ತು.
ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದ ಜೆಡಿಎಸ್, ‘ಪ್ರಚಾರಕ್ಕಾಗಿ ಫೋಟೋ ಶೂಟ್, ರೀಲ್ಸ್ ಶೋಕಿ ಬಿಟ್ಟು ಮೊದಲು ಸಚಿವ ಸ್ಥಾನದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ. ಹೆಬ್ಬಾಳ ಸಂಚಾರಿ ಪೊಲೀಸರೇ, ದ್ವಿಚಕ್ರ ವಾಹನದ ದಂಡವನ್ನು ವಸೂಲಿ ಮಾಡುವ ಕೆಲಸ ಆಗಲಿ’ ಎಂದು ಆಗ್ರಹಿಸಿತ್ತು.