ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಶೇ.15ಕ್ಕಿಂತ ಅಧಿಕ ಪ್ರಮಾಣದಲ್ಲಿ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ‘ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ’ ನೇತೃತ್ವದಲ್ಲಿ ಸಾರಿಗೆ ನೌಕರರು ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು 2024ರ ಜ.1ರಿಂದ 2027ರ ಡಿ.31ರ ವರೆಗೆ ನಾಲ್ಕು ವರ್ಷಗಳ ಅವಧಿಗೆ ಅನ್ವಯವಾಗುವಂತೆ ರಾಜ್ಯ ಸರಕಾರ ತನ್ನ ಎರಡು ಆದೇಶಗಳನ್ನು ತಿದ್ದುಪಡಿ ಮಾಡಬೇಕು. ನಾಲ್ಕು ಸಾರಿಗೆ ನಿಗಮಗಳ ಸೇವಾನಿರತ ಮತ್ತು ನಿವೃತ್ತ ನೌಕರರಿಗೆ 2024ರ ಸಾಲಿನ 12 ತಿಂಗಳ ಹಿಂಬಾಕಿ ವೇತನವನ್ನು ಪಾವತಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ರಾಜ್ಯದ ಸಾರಿಗೆ ನೌಕರರಿಗೆ ಸರಕಾರವೇ ಮಂಜೂರು ಮಾಡಿದ್ದ 26 ತಿಂಗಳ ವೇತನ ಹಿಂಬಾಕಿಯಲ್ಲಿ ಇದುವರೆಗೂ ಒಟ್ಟು 620 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಬಾಕಿಯಿರುವ 652 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ತಾಂತ್ರಿಕ ಸಿಬ್ಬಂದಿಗೆ ಉತ್ಪಾದನಾ ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ನಾಲ್ಕು ಸಾರಿಗೆ ನಿಗಮಗಳ ನೌಕರರು ಹಾಗೂ ನಿವೃತ್ತ ನೌಕರರ ಎಲ್ಲ ಬಾಕಿಗಳನ್ನು ಕೂಡಲೇ ಪಾವತಿಸಬೇಕು. ಎಲ್ಲ ನೌಕರರಿಗೆ ಹಾಲಿ ಇರುವ ಎಲ್ಲ ಮಾಸಿಕ, ದಿನ ಭತ್ಯೆಗಳನ್ನು ಹೆಚ್ಚಿಸಬೇಕು. ನಿವೃತ್ತ ನೌಕರರಿಗೆ 7,500 ರೂ. ಕನಿಷ್ಠ ಮೂಲ ಮಾಸಿಕ ಪಿಂಚಣಿಯನ್ನು ಮತ್ತು ವೈದ್ಯಕೀಯ ಭತ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ (ಎಐಟಿಯುಸಿ)ಅಧ್ಯಕ್ಷೆ ಜ್ಯೋತಿ ಅನಂತ ಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿಯ ಮಹಾ ಪ್ರದಾನ ಕಾರ್ಯದರ್ಶಿ ಬಿ.ಜಯದೇವರಾಜೇ ಅರಸು, ದಲಿತ ಹೋರಾಟಗಾರ ಆರ್.ಮೋಹನ್‍ರಾಜ್, ವಿಶ್ವಕಾರ್ಮಿಕರ ಕೂಟದ ಸಾರಿಗೆ ನಿಗಮಗಳ ವಲಯದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಮತ್ತಿತರರು ಹಾಜರಿದ್ದರು.

‘ಶಕ್ತಿ ಯೋಜನೆ’ಯ 6 ಸಾವಿರ ಕೋಟಿ ರೂ.ಪಾವತಿಸಿ: ಸರಕಾರ ನಾಲ್ಕೂ ಸಾರಿಗೆ ನಿಗಮಗಳಿಗೆ ಪಾವತಿಸಬೇಕಿರುವ ಶಕ್ತಿ ಯೋಜನೆಯ ಸುಮಾರು 6 ಸಾವಿರ ಕೋಟಿ ರೂ.ವನ್ನು ತಕ್ಷಣವೇ ಒಂದೇ ಕಂತಿನಲ್ಲಿ ಸಂದಾಯ ಮಾಡಬೇಕು. ಫಾರಂ-4, ವೈದ್ಯಕೀಯ ಸೌಲಭ್ಯ ಮತ್ತಿತರ ಬೇಡಿಕೆಗಳನ್ನು ಶೀಘ್ರದಲ್ಲೇ ಜಂಟಿ ಕ್ರಿಯಾ ಸಮಿತಿಯ ಜೊತೆಗೆ ಚರ್ಚಿಸಿ ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor