ರೋಹಿತ್ ವೇಮುಲಾ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ; 15 ವಿದ್ಯಾರ್ಥಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು : ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಖಂಡಿಸಿ 2016ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ 15 ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೊಯಿಲಾ ಗ್ರಾಮದ ಮೊಹಮ್ಮದ್ ತುಫೈಲ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದ ಸನ್ನಿವೇಶ, ಸಭೆಯಲ್ಲಿ ಭಾಗವಹಿಸಿದ್ದವರ ಸಂಖ್ಯೆ ಹಾಗೂ ಆರೋಪಪಟ್ಟಿಯಲ್ಲಿನ ಲೋಪಗಳನ್ನು ಪರಿಗಣಿಸಿದ ನ್ಯಾಯಾಲಯ, ಇದು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರ ಬಳಸಿ, ಅರ್ಜಿದಾರ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್ ಮತ್ತು ಮುಂದಿನ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಪಡಿಸಿ ಆದೇಶಿಸಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಬೆಂಗಳೂರಿನ ಸಭೆಗಳು ಮತ್ತು ಸಾರ್ವಜನಿಕ ಮೆರವಣಿಗೆಗಳ ಪರವಾನಗಿ ಹಾಗೂ ನಿಯಂತ್ರಣ ಆದೇಶ-2009 ಅನ್ನು ಪರಿಶೀಲಿಸಿದ ನ್ಯಾಯಾಲಯ, ಒಂದೇ ಸ್ಥಳದಲ್ಲಿ ಸಭೆ, ಪ್ರತಿಭಟನೆ ಅಥವಾ ಸಾರ್ವಜನಿಕ ಭಾಷಣ ನಡೆಸುವ ಉದ್ದೇಶದಿಂದ 250ಕ್ಕೂ ಅಧಿಕ ಜನರು ಸೇರುವುದಾದರೆ ಮಾತ್ರ ಪೂರ್ವಾನುಮತಿ ಅಗತ್ಯವಾಗಿದೆ. ಆದರೆ, ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿಯೇ ಪ್ರತಿಭಟನೆಯಲ್ಲಿ 100ರಿಂದ 150 ವಿದ್ಯಾರ್ಥಿಗಳು ಭಾಗವಹಿಸಿದ್ದರೆಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ವಿದ್ಯಾರ್ಥಿಗಳು ಯಾವ ನಿಯಮ ಅಥವಾ ಕಾನೂನು ನಿಬಂಧನೆ ಉಲ್ಲಂಘಿಸಿದ್ದಾರೆ ಎಂಬುದನ್ನು ಆರೋಪಪಟ್ಟಿಯಲ್ಲಿ ಸ್ಪಷ್ಟಪಡಿಸಿಲ್ಲ. ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಉಲ್ಲೇಖಿಸಿರುವಂತೆ ಆರೋಪಿಗಳು 'ಅಕ್ರಮ ಸಭೆ' ನಡೆಸಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರತಿಭಟನೆಯಲ್ಲಿ 100ರಿಂದ 150 ವಿದ್ಯಾರ್ಥಿಗಳು ಇದ್ದರು ಎಂದು ಪೊಲೀಸರು ಹೇಳಿದ್ದರೂ, ಕೇವಲ 15 ವಿದ್ಯಾರ್ಥಿಗಳನ್ನು ಮಾತ್ರ ಆರೋಪಿಗಳನ್ನಾಗಿ ಮಾಡಿರುವುದು ಏಕೆ ಎಂದು ಪ್ರಶ್ನಿಸಿರುವ ನ್ಯಾಯಪೀಠ, ಯಾವುದೇ ಸಭೆಯಲ್ಲಿ ವ್ಯಕ್ತಿಯೊಬ್ಬರು ಹಾಜರಿದ್ದ ಮಾತ್ರಕ್ಕೆ ಅವರನ್ನು ಐಪಿಸಿ ಸೆಕ್ಷನ್ 149ರ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಆ ಸಭೆಯ ಸದಸ್ಯರು ಸಾಮಾನ್ಯ ಅಪರಾಧ ಉದ್ದೇಶ ಹೊಂದಿದ್ದರು ಹಾಗೂ ಆರೋಪಿಯೂ ಅದೇ ಉದ್ದೇಶದಿಂದ ಕಾರ್ಯನಿರ್ವಹಿಸಿದ್ದನು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?
ಜಾತಿ ತಾರತಮ್ಯದ ಆರೋಪಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್ ವೇಮುಲಾ ಸಾವನ್ನು ಖಂಡಿಸಿ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಪೂರ್ವಾನುಮತಿ ಪಡೆಯದೆ ಗುಂಪು ಸೇರಿ ಘೋಷಣೆಗಳನ್ನು ಕೂಗಿದ್ದ ವಿದ್ಯಾರ್ಥಿಗಳು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ಆರೋಪಿಸಿದ್ದರು. ಆ ಸಂಬಂಧ 15 ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷ ನ್‌ಗಳಾದ 283, 341, 143 ಮತ್ತು 144ರ ಜತೆಗೆ ಸೆಕ್ಷ ನ್ 149ರ ಅಡಿಯಲ್ಲಿಪ್ರಕರಣ ದಾಖಲಿಸಲಾಗಿತ್ತು. 2016ರ ಜುಲೈ 20ರಂದು ಆರೋಪಪಟ್ಟಿಯನ್ನೂ ಸಲ್ಲಿಸಲಾಗಿತ್ತು.
ವಿದ್ಯಾರ್ಥಿಗಳು ಕ್ಯಾಪಿಟಲ್ ಹೋಟೆಲ್ ಮುಂಭಾಗದಿಂದ ರಾಜಭವನದ ಕಡೆಗೆ ತೆರಳಲು ಪ್ರಯತ್ನಿಸಿದ್ದರು. ಸುಮಾರು 100ರಿಂದ 150 ವಿದ್ಯಾರ್ಥಿಗಳು ಧ್ವಜಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಎಂಬುದು ಪೊಲೀಸರ ವಾದವಾಗಿತ್ತು. ಈ ಪ್ರಕರಣ ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ವಿದ್ಯಾರ್ಥಿಗಳು ರಾಜಭವನಕ್ಕೆ ಮನವಿ ಸಲ್ಲಿಸಲು ತೆರಳುತ್ತಿದ್ದರು ಎಂಬುದಷ್ಟೇ ಅವರ ವಿರುದ್ಧದ ಪ್ರಮುಖ ಆರೋಪವಾಗಿದೆ. ಅವರು ಅಕ್ರಮ ಉದ್ದೇಶದಿಂದ ಗುಂಪು ಸೇರಿದ್ದರು ಎಂಬುದನ್ನು ತೋರಿಸುವ ಯಾವುದೇ ಅಂಶ ಆರೋಪಪಟ್ಟಿಯಲ್ಲಿ ಇಲ್ಲ ಎಂದು ವಾದಿಸಿದ್ದರಲ್ಲದೆ, ಚರಣ್ ಸಿಂಗ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ನಡುವಿನ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, ಅಕ್ರಮ ಸಭೆಯ ಸಾಮಾನ್ಯ ಉದ್ದೇಶ ಸಾಬೀತಾಗದಿದ್ದರೆ ಐಪಿಸಿ ಸೆಕ್ಷನ್ 149 ಅಡಿಯಲ್ಲಿ ಆರೋಪಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಆ ತೀರ್ಪಿನಲ್ಲಿ ಹೇಳಲಾಗಿದೆ ಎಂದು ವಿವರಿಸಿದ್ದರು.