×
Ad

ಶೇ.53.51ರಷ್ಟು ಮಹಿಳೆಯರು ‘ನರೇಗಾ’ದಲ್ಲಿ ತೊಡಗಿಸಿಕೊಂಡಿದ್ದಾರೆ: ಪ್ರಿಯಾಂಕ್ ಖರ್ಗೆ

Update: 2025-02-15 23:33 IST

ಬೆಂಗಳೂರು : ಶೇ.53.51ರಷ್ಟು ಮಹಿಳೆಯರು ನರೇಗಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು ಮೇಲುಗೈ ಸಾಧಿಸಿದ್ದಾರೆ. ಮಹಿಳೆಯರಿಗೆ ನರೇಗಾ ಯೋಜನೆಯು ಆರ್ಥಿಕ ಹಾಗೂ ಸ್ವಾವಲಂಬನೆಯ ಸಾಮಾಜಿಕ ಬಲ ನೀಡುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶನಿವಾರ ಈ ಕುರಿತು ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ಇತ್ತೀಚಿಗೆ ದೊಡ್ಡ ನಿರ್ಮಾಣ ಕಂಪೆನಿಯ ಅಧ್ಯಕ್ಷರೊಬ್ಬರು ನರೇಗಾದಂತಹ ಯೋಜನೆಯಿಂದ ಜನತೆ ತಾವಿದ್ದಲ್ಲಿಯೇ ಸಂತುಷ್ಠರಾಗಿ ಬದುಕುತ್ತಿದ್ದಾರೆ ಎಂದು ದೂರಿದ್ದರು. ಅವರ ಪ್ರಕಾರ ಅದು ಟೀಕೆ, ಆದರೆ ನಮಗೆ ಅದು ಹೊಗಳಿಕೆಯಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

ನರೇಗಾ ಯೋಜನೆಯಿಂದ ವಲಸೆ ತಡೆಗಟ್ಟುವಿಕೆ, ಮಹಿಳಾ ಸಬಲೀಕರಣ, ಕುಟುಂಬ ಕಲ್ಯಾಣ, ಗ್ರಾಮೀಣ ಆರ್ಥಿಕತೆಯ ಸುಧಾರಣೆಗಳು ಸಾಧ್ಯವಾಗುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಲವು ಗುರಿ ಮತ್ತು ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಪುರುಷರಿಗೆ ಸರಿಸಮಾನವಾದ ದುಡಿಮೆ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮಹಿಳಾ ಸಬಲೀಕರಣದ ಕನಸು ಈ ಮೂಲಕ ಸಾಕಾರಗೊಳ್ಳುತ್ತಿದೆ. ಅಭಿವೃದ್ಧಿಯುಕ್ತ ಗ್ರಾಮ ಭಾರತದ ನಿರ್ಮಾಣದೆಡೆಗಿನ ಹೆಜ್ಜೆಯೂ ದೃಢವಾಗುತ್ತಿದೆ ಎಂದು ಹೇಳಿದ್ದಾರೆ.

ನರೇಗಾ ಯೋಜನೆ ಲಾಭವನ್ನು ಪಡೆಯುವುದರಲ್ಲಿ ಮಹಿಳೆಯರು ಮುಂದಿದ್ದು, ಒಟ್ಟು 24.95 ಲಕ್ಷಕ್ಕೂ ಅಧಿಕ ನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದಾರೆ. ಹೆಣ್ಣುಮಕ್ಕಳಿಗೆ ದುಡಿಯುವ ಅವಕಾಶಗಳನ್ನು ಒದಗಿಸಿದರೆ ಅವರು ಎಲ್ಲ ಅಡೆತಡೆಗಳನ್ನು ಮೀರಿ ಸಾಧಿಸಬಲ್ಲರು. ಮಹಿಳಾ ಸಬಲೀಕರಣದ ಗುರಿಗೆ ನರೇಗಾ ಯೋಜನೆ ಭದ್ರ ಬುನಾದಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News