×
Ad

ಜುಲೈ 4ಕ್ಕೆ ದೇವನಹಳ್ಳಿ ರೈತರ ಜೊತೆ ಸಭೆ: ಸಿದ್ದರಾಮಯ್ಯ ಭರವಸೆ

Update: 2025-06-26 14:16 IST

ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಗೆ ಸೇರಿದ 13 ಗ್ರಾಮಗಳ 1,777 ಎಕರೆ ಕೃಷಿ ಭೂಮಿ ಸ್ವಾಧೀನವನ್ನು ತಕ್ಷಣ ನಿಲ್ಲಿಸುವಂತೆ ರೈತರು ಒತ್ತಾಯಿಸುತ್ತಿರುವ ಸಂಬಂಧ ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರೊಂದಿಗೆ ಅವರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಗುರುವಾರ ನಗರದಲ್ಲಿರುವ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಟ ಪ್ರಕಾಶ್ ರಾಜ್ ಸಹಿತ ವಿವಿಧ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ‘ಸರಕಾರ ರೈತರ ಪರವಾಗಿಯೇ ಇರಲಿದೆ. ಜುಲೈ 4ರಂದು ದೇವನಹಳ್ಳಿ ಚನ್ನರಾಯಪಟ್ಟಣ ರೈತ ಹೋರಾಟಗಾರರು ಮತ್ತು ಸಂಯುಕ್ತ ಹೋರಾಟ ವೇದಿಕೆ ಮುಖಂಡರ ಜೊತೆ ಆ ಭಾಗದ ರೈತರ ಬೇಡಿಕೆ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಭೆಯನ್ನು ನಡೆಸಲಾಗುವುದು’ ಎಂದರು.

ಸರಕಾರ ಏಕಪಕ್ಷೀಯ ನಿರ್ಧಾರ ಸರಿಯಲ್ಲ : ಪ್ರಕಾಶ್ ರಾಜ್

ಸಿಎಂ ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಪ್ರಕಾಶ್ ರಾಜ್, ‘ಕಾಂಗ್ರೆಸ್ ಸರಕಾರ ರೈತರ ಭೂಮಿಯನ್ನು ಕಸಿದುಕೊಂಡು ಟೆಕ್‍ಪಾರ್ಕ್ ನಿರ್ಮಿಸಲು ಮುಂದಾಗಿದೆ. ಈ ರೈತರು ಮೂರುವರೆ ವರ್ಷಗಳಿಗೂ ಹೆಚ್ಚು ಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ, ಬಿಜೆಪಿ ಆಡಳಿತದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ, ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದರು. ಆದರೆ ಈಗ, ಮುಖ್ಯಮಂತ್ರಿಯಾಗಿ, ಅವರು ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ, ಇದು ದ್ರೋಹ’ ಎಂದರು.

‘13 ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ಯಾವುದೆ ಕಾರಣಕ್ಕೂ ಕೆಐಎಡಿಬಿ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಬಾರದು. ಸರಕಾರ ಏಕಪಕ್ಷೀಯ ನಿರ್ಧಾರ ಸರಿಯಲ್ಲ. ರೈತರು ಹಾಗೂ ಹೋರಾಟಗಾರರ ಬಂಧನ ಖಂಡನೀಯ. ರೈತರ ಭೂಮಿಯನ್ನು ಕಸಿದುಕೊಳ್ಳಬೇಡಿ’ ಎಂದು ಪ್ರಕಾಶ್ ರಾಜ್ ಮನವಿ ಮಾಡಿದರು.

ರೈತ ಮುಖಂಡ ಸಿರಿಮನೆ ನಾಗರಾಜ್ ಮಾತನಾಡಿ, ‘ಮುಖ್ಯಮಂತ್ರಿಗಳು ಮಾತುಕತೆಗೆ ಕರೆದಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ರೈತರ ಎಲ್ಲ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಬೇಕು ಹಾಗೂ ಜನ ಸಾಮಾನ್ಯರ ಧ್ವನಿಯನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ವೀರಸಂಗಯ್ಯ, ವಿಜಯಮ್ಮ, ಕೆ.ಎಸ್.ವಿಮಲಾ, ತಾರಾ, ಸುಷ್ಮಾ ಮತ್ತಿತರರು ಹಾಜರಿದ್ದರು.

ಮೆರವಣಿಗೆ: ದೇವನಹಳ್ಳಿ ತಾಲೂಕಿನ ಕೃಷಿಭೂಮಿ ಸ್ವಾಧೀನವನ್ನು ತಕ್ಷಣ ನಿಲ್ಲಿಸಲು ಒತ್ತಾಯಿಸಿ ನಟ ಪ್ರಕಾಶ್ ರಾಜ್, ರೈತ ಮುಖಂಡ ಬಡಗಲಪುರ ನಾಗೇಂದ್ರ, ಸಂಯುಕ್ತ ಹೋರಾಟ ಸಮಿತಿಯ ವೀರಸಂಗಯ್ಯ, ವಿಜಯಮ್ಮ, ಕೆ.ಎಸ್.ವಿಮಲಾ ಸಹಿತ ನೂರಾರು ರೈತರು, ಹೋರಾಟಗಾರರು ಗುರುವಾರ ಬೆಳಗ್ಗೆ ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಶಾಂತಿಯುತ ಮೆರವಣಿಗೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News