ವೇತನ ಆಯೋಗ ಅನುಷ್ಟಾನಕ್ಕೆ 19,401 ಕೋಟಿ ರೂ. ಹೆಚ್ಚುವರಿ ಮೊತ್ತ ಮೀಸಲು
ಸಿದ್ದರಾಮಯ್ಯ
ಬೆಂಗಳೂರು : ಏಳನೆ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಸರಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಿ 2024ರ ಆ.1ರಿಂದ ಜಾರಿ ಅನುಷ್ಟಾನ ಮಾಡಲಾಗುತ್ತಿದ್ದು, ಇದಕ್ಕಾಗಿ ವರ್ಷಕ್ಕೆ ಹೆಚ್ಚುವರಿಯಾಗಿ 19,401 ಕೋಟಿ ರೂ.ಗಳನ್ನು ಭರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಕೆ-ಜಿಐಎಸ್ ಪೋರ್ಟಲ್ ಅನ್ನು ಆಧುನಿಕ ತಂತ್ರಜ್ಞಾನಗಳಾದ ಎಐ/ಎಂಎಲ್ ಮತ್ತು ಇತರ ಪರಿಕರಗಳನ್ನು ಬಳಸಿ ಸಾಲಿನಿಂದ ಹಂತಹಂತವಾಗಿ 150 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಎಂದರು.
ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಡಿಬಿಟಿ ಮೂಲಕ ಇಲ್ಲಿಯವರೆಗೆ ಸುಮಾರು 50 ಸಾವಿರ ಕೋಟಿ ರೂ. ವಿತರಿಸಲಾಗಿದೆ. ಮುಂದಿನ ವರ್ಷದಲ್ಲಿ ಸರಕಾರದ ಎಲ್ಲ ನಗದು ಮತ್ತು ನಗದುರಹಿತ ಪ್ರಯೋಜನದ ಯೋಜನೆಗಳನ್ನು ಡಿಬಿಟಿಗೆ ತರಲು ಕ್ರಮವಹಿಸಲಾಗುವುದು ಎಂದರು.
ರಾಜ್ಯದ ಬಹುತೇಕ ಎಲ್ಲ ಕಛೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರವು ತನ್ನದೇ ಆದ ಇ-ಆಫೀಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗುವುದು ಎಂದು ಅವರು ತಿಳಿಸಿದರು.