ಬ್ರಾಹ್ಮಣರಿಗೆ ತಲೆಬಾಗಿದ ಶೂದ್ರರಿಂದ ಅಸ್ಪೃಶ್ಯತೆ ಅಸ್ತಿತ್ವದಲ್ಲಿ: ಅಗ್ನಿ ಶ್ರೀಧರ್
ಅಗ್ನಿ ಶ್ರೀಧರ್
ಬೆಂಗಳೂರು : ‘ಮನುಸ್ಮತಿ, ಬ್ರಾಹ್ಮಣ್ಯದಿಂದ ಈ ದೇಶದಲ್ಲಿ ಅಸ್ಪಶ್ಯತೆ ಉಂಟುಮಾಡಿತು ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ, ಅಸ್ಪೃಶ್ಯತೆ ಬ್ರಾಹ್ಮಣರಿಂದ ಬರಲಿಲ್ಲ, ಈ ನೆಲದ ಶೂದ್ರರಿಂದ ಬಂದಿದ್ದು, ಬದಲಾಗಬೇಕಿರುವುದು ಬ್ರಾಹ್ಮಣರು ಅಲ್ಲ, ಶೂದ್ರರು’ ಎಂದು ಹಿರಿಯ ಪತ್ರಕರ್ತ, ಚಿಂತಕ ಅಗ್ನಿ ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಮತಾ ಸೈನಿಕ ದಳ ವತಿಯಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, ರಾಷ್ಟ್ರೀಯಾಧ್ಯಕ್ಷ ಎಂ.ವೆಂಕಟಸ್ವಾಮಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೂದ್ರರು ಬ್ರಾಹ್ಮಣರಿಗೆ ಶರಣಾಗಿ ಅವರು ಹೇಳುವ ಕಟ್ಟುಪಾಡುಗಳನ್ನು ಪಾಲಿಸಲು ಒಪ್ಪಿಕೊಂಡಿದ್ದರು. ಅದನ್ನು ಒಪ್ಪದವರೇ ಅಸ್ಪಶ್ಯರಾದರು. ಹೊಲೆಯರು, ಮಾದಿಗರೆಲ್ಲ ಒಂದು ಕಾಲದಲ್ಲಿ ಒಕ್ಕಲಿಗರೇ ಆಗಿದ್ದರು. ಮೀಸಲಾತಿ ತೆಗೆದರೆ ಒಬ್ಬನೇ ಒಬ್ಬ ದಲಿತ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಿದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಒಬ್ಬರು ಎಲ್ಲರಿಗೂ ಸಹಾಯ ಮಾಡಲು ಆಗುವುದಿಲ್ಲ. ಎಲ್ಲರೂ ಒಬ್ಬೊಬ್ಬರಿಗೆ ಸಹಾಯ ಮಾಡಲು ಸಾಧ್ಯ. ಹಳಸಿದ್ದನ್ನು ಕೊಡುವ ಬದಲು ಉಳಿಸಿದ್ದನ್ನು ಕೊಡಬೇಕು. ಕಿತ್ತು ತಿನ್ನಬಾರದು, ಹಂಚಿ ತಿನ್ನಬೇಕು. ಇನ್ನೊಬ್ಬರಿಗೆ ಸಹಾಯ ಮಾಡಿದರೆ ಜಾಸ್ತಿ ದಿನ ಬದುಕುತ್ತೇವೆ. ‘ನಮಗೆ ನೋವಾಗುವುದು ಅರಿವಾದರೆ ನಾವು ಜೀವಂತ ಇದ್ದೇವೆ ಎಂದರ್ಥ. ಬೇರೆಯವರಿಗೆ ನೋವು ಅರ್ಥವಾದರೆ ನಾವು ಮನುಷ್ಯರು ಎಂದರ್ಥ. ಜ್ಞಾನದ ಭಾಷೆಗಿಂತ ಹೃದಯದ ಭಾಷೆ ಮಿಗಿಲು ಎಂದು ಹೇಳಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಗಳಲ್ಲಿ ಎಲ್ಲರೂ ಮುನ್ನಡೆಯಬೇಕು. ಯಾವುದೇ ಪಕ್ಷದಲ್ಲಿದ್ದರೂ ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಒಂದು ಕಡೆಯಿಂದ ದಲಿತ ಸಮುದಾಯದವರು ಬೆಳೆಯುತ್ತಿದ್ದಾರೆ. ಇನ್ನೊಂದು ಕಡೆಯಿಂದ ಬೀಳುತ್ತಿದ್ದಾರೆ. ಇದರ ಬಗ್ಗೆ ವಿಮರ್ಶೆ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನಾರಾಯಣ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಿದ್ದು, ಅವರ ಮಗ ಗುರುದೇವ್ ನಾರಾಯಣ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ನಾಗಸೇನಾ ಬುದ್ಧ ವಿಹಾರದ ಬಿಕ್ಕುಣಿ ಬುದ್ಧಮ್ಮ ಪಂಚಶೀಲ ತತ್ವ ಬೋಧಿಸಿದರು. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎಸ್‌ಎಸ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಭಾಗವಹಿಸಿದ್ದರು.