ಬೆಂಗಳೂರು : ವಿಧಾನಸೌಧವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಎಐ ವೀಡಿಯೊ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ :

ಮಂಗಳವಾರ ಬೆಳಗ್ಗೆ 9:26ಕ್ಕೆ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. "jnx_king_h_g" ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಿಧಾನಸೌಧಕ್ಕೆ ಬಾಂಬ್ ಇಟ್ಟು ಸ್ಫೋಟಿಸುವ ರೀತಿಯಲ್ಲಿ ಎಐ ವೀಡಿಯೊ ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದ. ಅಲ್ಲದೆ, ಆ ವೀಡಿಯೊಗೆ "Vidhanasabha Uda Diya Bam se"ಎಂಬ ಶೀರ್ಷಿಕೆಯನ್ನು ಸಹ ನೀಡಲಾಗಿತ್ತು.

ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಆತಂಕ ಮತ್ತು ಭೀತಿಯನ್ನು ಹುಟ್ಟಿಸುವ ಹಾಗೂ ಸರಕಾದ ವಿರುದ್ಧ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ದುರುದ್ದೇಶದಿಂದ ವಿದ್ಯುನ್ಮಾನ ಸಾಧನಗಳನ್ನು ಬಳಸಿ ಈ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಎಸ್.ಪಿ. ಕುಮಾರ್ ಸ್ವಾಮಿ ಅವರು ನೀಡಿದ ದೂರಿನ ಮೇರೆಗೆ, ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 353(1)(ಬಿ) ಹಾಗೂ 353(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಅಪರಿಚಿತ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor