Anekal | ಮದುವೆಗೆ ನಿರಾಕರಿಸಿದ ಯುವತಿ; ಹೈಟೆನ್ಷನ್ ಟವರ್ ಏರಿದ ಯುವಕ !
ಬೆಂಗಳೂರು(ಆನೇಕಲ್): ಪ್ರೀತಿಸಿದ್ದ ಯುವತಿ ಮದುವೆಗೆ ನಿರಾಕರಿಸಿದ್ದರಿಂದ ಬೇಸತ್ತ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಸೋಮಶೇಖರ್ ಟವರ್ ಏರಿದ ಯುವಕ. ಈತ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನೆಂದು ಹೇಳಲಾಗಿದೆ. ಇತ್ತೀಚೆಗೆ ಯುವತಿ ಮದುವೆಗೆ ನಿರಾಕರಿಸಿ ಪ್ರೇಮ ಸಂಬಂಧಕ್ಕೆ ಅಂತ್ಯ ಹಾಡಿದ್ದಳೆನ್ನಲಾಗಿದೆ. ಇದರಿಂದ ಮನನೊಂದ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. ಬಳಿಕ ಮನೆ ಸಮೀಪದ ಹೈಟೆನ್ಷನ್ ವಿದ್ಯುತ್ ಟವರ್ ಏರಿದ್ದಾನೆ.
‘ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ಕೆಳಗಿಳಿಯುವುದಿಲ್ಲ’ ಎಂದು ಆತ ಕಂಬದ ಮೇಲಿಂದಲೇ ಕೂಗಾಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ಕೆಳಗಿಳಿಸಲು ಹರಸಾಹಸ ಪಟ್ಟರು. ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಅಪಾಯವಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಸ್ಥಳಕ್ಕೆ ಯುವತಿಯ ಪೋಷಕರು ಹಾಗೂ ಯುವತಿಯನ್ನು ಕೂಡ ಕರೆತರಲಾಗಿದ್ದು, ತಾಳಿ, ಅರಿಶಿಣ-ಕುಂಕುಮ ಹಿಡಿದು ಮನವೊಲಿಸುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿದುಬಂದಿದೆ.