‘ತನ್ನ ವಿರುದ್ಧದ ಆರೋಪಕ್ಕೆ ದಾಖಲೆ ಕೊಡಿ’ : ಅನ್ವರ್ ಬಾಷಾ ಸವಾಲು
ಬೆಂಗಳೂರು : ವಕ್ಫ್ ಬೋರ್ಡ್ ಚುನಾವಣೆ ಹಾಗೂ ಚಿತ್ರದುರ್ಗ ಅಗಸನಕಲ್ಲು ಸರ್ವೆ ನಂಬರ್ 25 ರ ಜಮೀನು ಒತ್ತುವರಿ ಆರೋಪ ಸಂಬಂಧ ಅಜ್ಮಲ್ ಅಹಮದ್, ಮನ್ಸೂರ್, ದಾದಾಪೀರ್, ಸೈಫುಲ್ಲಾ ಮಾಡಿರುವ ಆರೋಪಕ್ಕೆ ಸಾಕ್ಷಿ ಕೊಟ್ಟರೆ ಒಂದು ನಿಮಿಷದಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದ್ದು, ರಾಜಕೀಯವಾಗಿ ಎದುರಿಸಲು ಆಗದೆ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಚುನಾವಣೆ ಕಾನೂನು ಬದ್ಧವಾಗಿ ನಡೆದಿದೆ. ಏನಾದರೂ ತಕರಾರು ಇದ್ದಲ್ಲಿ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಚುನಾವಣೆಗೆ ಮುಂಚೆ ಪ್ರಶ್ನೆ ಮಾಡಬಹುದಿತ್ತು. ಎಲ್ಲ ಪ್ರಕ್ರಿಯೆ ಮುಗಿದ ಮೇಲೆ ಇದೀಗ ಪತ್ರಿಕಾಗೋಷ್ಠಿ ನಡೆಸಿ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಅನ್ವರ್ ಬಾಷಾ ಆಕ್ಷೇಪಿಸಿದರು.
ಅಗಸನಕಲ್ಲು ಸರ್ವೆ ನಂಬರ್ 25 ರ ವಿಚಾರದಲ್ಲಿ ಎಲ್ಲ ರೀತಿಯ ತನಿಖೆ ನಡೆದು ಒತ್ತುವರಿ ಆಗಿಲ್ಲ ಎಂದು ಅಧಿಕಾರಿಗಳೆ ಹೇಳಿದ್ದಾರೆ. ಆದರೂ ಪದೇ ಪದೇ ಒತ್ತುವರಿ ಎಂದು ಹೇಳಿ ದಿಕ್ಕು ತಪ್ಪಿಸಲಾಗುತ್ತಿದೆ. ಒತ್ತುವರಿ ಬಗ್ಗೆ ಒಂದೇ ಒಂದು ದಾಖಲೆ ಕೊಟ್ಟರೂ ಒಂದು ಕ್ಷಣವೂ ಯಾವುದೇ ಅಧಿಕಾರದಲ್ಲಿ ಇರುವುದಿಲ್ಲ. ಆರೋಪ ಮಾಡುವವರು ದಾಖಲೆ ಕೊಡಲಿ. ಈ ಬಗ್ಗೆ ಯಾವುದೇ ರೀತಿಯ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದು ಅವರು ಹೇಳಿದರು.