×
Ad

ಬೆಂಗಳೂರು | ಪೊಲೀಸರ ಸೋಗಿನಲ್ಲಿ ವ್ಯಕ್ತಿಯನ್ನು ಬೆದರಿಸಿ ಸುಲಿಗೆ; ಮೂವರ ಬಂಧನ

Update: 2024-12-27 18:41 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

57 ವರ್ಷದ ಸಿವಿಲ್ ಗುತ್ತಿಗೆದಾರರೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತೋಷ್‌, ಅಜಯ್ ಹಾಗೂ ಜಯರಾಜ್ ಎಂಬಾತನನ್ನು ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ತಲೆಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ದೂರುದಾರ ಇತ್ತೀಚಿಗೆ ಪರಿಚಯವಾಗಿದ್ದ ನಯನಾ ಎಂಬಾಕೆ ಆಗಾಗ ತನ್ನ ಮಗುವಿಗೆ ಆರೋಗ್ಯ ಸರಿಯಿಲ್ಲವೆಂದು ಹಣ ಪಡೆದುಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರ ವ್ಯಕ್ತಿ ಹೋಗಿರಲಿಲ್ಲ. ಡಿ.9ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, ನಮ್ಮ ಮನೆ ಸಮೀಪದಲ್ಲಿಯೇ ಇದೆ, ಬನ್ನಿ ಎಂದು ಆಹ್ವಾನಿಸಿದ್ದಳು.

ಅದರಂತೆ ದೂರುದಾರ ಆಕೆಯ ಮನೆಗೆ ಹೋಗಿದ್ದಾಗ ಮೂವರು ಆರೋಪಿಗಳು ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿ ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಆನಂತರ, ಕೇಳಿದಷ್ಟು ಹಣ ನೀಡದಿದ್ದರೆ, ಅಕ್ರಮ ಸಂಬಂಧದ ಕುರಿತು ನಿನ್ನ ಪತ್ನಿಗೆ ಹೇಳುತ್ತೇವೆಂದು ಬೆದರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ದೂರುದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ ಬಿಚ್ಚಿಸಿಕೊಂಡು 55 ಸಾವಿರ ನಗದು ಪಡೆದುಕೊಂಡು ಸ್ಥಳದಿಂದ ತೆರಳಿದ್ದರು. ಆರೋಪಿಗಳೊಂದಿಗೆ ತಾನೂ ತೆರಳಿದ್ದ ನಯನಾ ಬಗ್ಗೆ ಅನುಮಾನಗೊಂಡ ಸಂತ್ರಸ್ತ, ದೂರು ಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News