ಬೆಂಗಳೂರು | ಪಾಸ್‌ವರ್ಡ್ ಬಳಸಿ ಎಟಿಎಂನಿಂದಲೇ ಹಣ ಕಳವು ಆರೋಪ : ಏಜೆನ್ಸಿಯ ಆರು ಸಿಬ್ಬಂದಿಗಳ ಬಂಧನ
ಬೆಂಗಳೂರು : ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಸ್ವಲ್ಪ ಹಣ ಹಾಕಿ ಉಳಿದ ಹಣ ಕಳವು ಮಾತ್ರವಲ್ಲದೆ, ಪಾಸ್‌ವರ್ಡ್ ಬಳಸಿ ಎಟಿಎಂನಿಂದಲೇ ಹಣ ಕದಿಯುತ್ತಿದ್ದ ಆರೋಪದಡಿ ಏಜೆನ್ಸಿಯೊಂದರ ಆರು ಮಂದಿ ನೌಕರರನ್ನು ಮಹಾಲಕ್ಷ್ಮೀಲೇಔಟ್ ಠಾಣೆ ಪೊಲೀಸರು ಬಂಧಿಸಿ 51.76 ಲಕ್ಷ ನಗದು ಸೇರಿದಂತೆ 90 ಲಕ್ಷ ಮೌಲ್ಯದ 3 ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ನಂದಿನಿ ಲೇಔಟ್ ನಿವಾಸಿಗಳಾದ ಸಮೀರ್ (26), ಕ್ಯಾಶ್ ಲೋಡರ್ ಮನೋಹರ(29), ಗಿರೀಶ್(26), ಜಗ್ಗೇಶ್(28), ಗೂಡ್ಸ್ ವಾಹನದ ಚಾಲಕ ಶಿವು(27) ಹಾಗೂ ಜಶ್ವಂತ(27) ಬಂಧಿತ ಆರೋಪಿಗಳೆಂದು ಅವರು ಹೇಳಿದ್ದಾರೆ.
ಆರೋಪಿಗಳು ಲಪಟಾಯಿಸಿದ ಹಣದಿಂದ ಮೂರು ಕಾರುಗಳನ್ನು ಖರಿದೀಸಿದ್ದು, ಅವುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಎರಡು ವರ್ಷಗಳಿಂದ ಈ ಆರೋಪಿಗಳು ಎಟಿಎಂನಿಂದ ಹಣ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಕೆಂಪೇಗೌಡ ಲೇಔಟ್, ಸರ್ವೀಸ್ ರಸ್ತೆಯಲ್ಲಿರುವ ಟೀ ಶಾಪ್ ಬಳಿ ಆರು ಮಂದಿ ಸೇರಿಕೊಂಡು ಹಣಕಾಸಿನ ವಿಚಾರವಾಗಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಎಟಿಎಂ ಗಳಲ್ಲಿ ಹಣವನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ಲಗ್ಗೆರೆಯ ಚೌಡೇಶ್ವರಿ ನಗರದ ಆರೋಪಿಯ ಮನೆಯಲ್ಲಿ 8ಲಕ್ಷ ನಗದು, ಮತ್ತೊಬ್ಬ ಆರೋಪಿಯು ಕಳವು ಮಾಡಿದ ಹಣದಲ್ಲಿ ಆತನ ಪತ್ನಿಗೆ ಕೊಡಿಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.