ಬೆಂಗಳೂರು | ಮದ್ರಸಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ; ಆರೋಪಿ ಬಂಧನ
ಬೆಂಗಳೂರು : ಮದ್ರಸಾವೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಓರ್ವನನ್ನು ಇಲ್ಲಿನ ಕೊತ್ತನೂರು ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ಥಣಿಸಂದ್ರ ವ್ಯಾಪ್ತಿಯಲ್ಲಿರುವ ಜಾಮೀಯ ಆಯಿಷಾ ಸಿದ್ದೀಖಾ ಲಿಲ್ ಬನಾತ್ ಮದ್ರಸಾದ 11 ವರ್ಷದ ಬಾಲಕಿ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ವಿದ್ಯಾರ್ಥಿಗಳ ವಸತಿ ಗೃಹದ ಉಸ್ತುವಾರಿಯ ಪುತ್ರ ಮುಹಮ್ಮದ್ ಹಸನ್ ಅಲಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೆ.16 ರಂದು ಆರೋಪಿ ಮುಹಮ್ಮದ್ ಹಸನ್ ಅಲಿ ವಿದ್ಯಾರ್ಥಿಗಳ ವಸತಿ ಗೃಹಕ್ಕೆ ಭೇಟಿ ನೀಡಿದ್ದು, ಅಕ್ಕಿಯನ್ನು ಕೆಳಗೆ ಸುರಿದು ಮತ್ತು ಇತರ ವಿದ್ಯಾರ್ಥಿನಿಯರೊಂದಿಗೆ ಜಗಳವಾಡಿದ ಆರೋಪದ ಮೇಲೆ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆಂದು ಸಂತ್ರಸ್ತೆಯ ತಾಯಿ ದೂರು ಸಲ್ಲಿಸಿದ್ದರು.
ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯ ಸಿಬ್ಬಂದಿ, ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಕೀಲ ಹುಸೇನ್ ಉವೈಸ್, ಆರೋಪಿ ಉದ್ದೇಶ ಪೂರಕವಾಗಿ ಹಲ್ಲೆ ನಡೆಸಿದ್ದು, ಅಪ್ರಾಪ್ತ ಬಾಲಕಿವೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಈ ಕುರಿತು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಹ ಸಲ್ಲಿಸಲಾಗಿತ್ತು. ಅದರನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಥಣಿಸಂದ್ರದಲ್ಲಿ 2021ರಿಂದ ಮದ್ರಸಾ ನಡೆಸಲಾಗುತ್ತಿದ್ದು, ಇಲ್ಲಿ 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮದ್ರಸಾವನ್ನು ತಂದೆ ಹಾಗೂ ಇಬ್ಬರು ಮಕ್ಕಳು ನಡೆಸುತ್ತಿದ್ದಾರೆ. ಹಸನ್ ಅಲಿ ಬಂಧನ ಮಾಡಿದ್ದೇವೆ. ಈತ ಮದ್ರಸಾ ಆಡಳಿತದಲ್ಲಿ ಸದಸ್ಯನಾಗಿದ್ದು, ಆತನ ಸಹೋದರಿ ನಿಶಾ ಪ್ರಾಂಶುಪಾಲರಾಗಿದ್ದಾರೆ. ಹೀಗಾಗಿ ಮದ್ರಸಾಗೆ ಬಂದು ಏಕಾಏಕಿ ಹಲ್ಲೆ ಮಾಡಿದ್ದಾನೆ ಎಂದೂ ಅವರು ಆರೋಪಿಸಿದರು.