ಸಾಂದರ್ಭಿಕ ಚಿತ್ರ | PC : Image by redgreystock on Magnific

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಉತ್ಪನ್ನಗಳ ಬಗ್ಗೆ ಅಥೆಂಟಿಕೇಶನ್ ಸೊಲ್ಯೂಷನ್ ಪ್ರೊವೈಡರ್ಸ್ ಅಸೋಸಿಯೇಷನ್ (ಎಎಸ್‌ಪಿಎ) ‘ಫೇಕ್ ಫ್ರೀ ಇಂಡಿಯಾ’ ಗ್ರಾಹಕ ಜಾಗೃತಿ ಅಭಿಯಾನ ಹಾಗೂ ಸಮೀಕ್ಷೆಯನ್ನು ನಡೆಸಿದ್ದು, ಈ ಸಮೀಕ್ಷೆಗೆ ಒಳಪಟ್ಟಂತಹ ಶೇ.97ರಷ್ಟು ಗ್ರಾಹಕರು ನಕಲಿ ತಡೆ ಅಭಿಯಾನಗಳಿಗೆ ಬೇಡಿಕೆ ಇಟ್ಟಿರುವುದಾಗಿ ವರದಿಯಲ್ಲಿ ಬಹಿರಂಗವಾಗಿದೆ.

ಶನಿವಾರ ನಗರದಲ್ಲಿ ಸಮೀಕ್ಷಾ ವರದಿಯನ್ನು ಮಂಡಿಸಿದ ಎಎಸ್‌ಪಿಎ ಅಧ್ಯಕ್ಷ ಅಂಕಿತ್ ಗುಪ್ತಾ, ಈ ಸಮೀಕ್ಷೆಯ ಮೂಲಕ ಬೆಂಗಳೂರು ನಮಗೆ ಬಹಳ ಸ್ಪಷ್ಟವಾದ ಸಂದೇಶವನ್ನು ನೀಡಿದೆ. ಇಲ್ಲಿನ ಶೇ.97ರಷ್ಟು ಗ್ರಾಹಕರು ನಕಲಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಜಾಗೃತಿ ಬಯಸುತ್ತಾರೆ, ಇದು ನಾವು ಅಧ್ಯಯನ ಮಾಡಿದ ಯಾವುದೇ ನಗರಕ್ಕಿಂತ ಹೆಚ್ಚಾಗಿದೆ ಎಂದರು.

ಬೆಂಗಳೂರು ಜನರು ಆತ್ಮವಿಶ್ವಾಸವುಳ್ಳವರು ಮತ್ತು ಡಿಜಿಟಲ್ ಜ್ಞಾನ ಹೊಂದಿದ್ದಾರೆ, ಆದರೆ, ಪರಿಶೀಲನೆ ಸರಳವಾಗಿಲ್ಲದಿದ್ದರೆ ಕೇವಲ ಆತ್ಮವಿಶ್ವಾಸವು ಗ್ರಾಹಕರನ್ನು ರಕ್ಷಿಸುವುದಿಲ್ಲ. ಆ ಆತ್ಮವಿಶ್ವಾಸವನ್ನು ಖರೀದಿಸುವ ಮೊದಲು ಪರಿಶೀಲಿಸುವ ಅಭ್ಯಾಸವನ್ನಾಗಿ ಪರಿವರ್ತಿಸುವುದೇ ನಿಜವಾದ ಕೆಲಸವಾಗಿದೆ ಎಂದು ಅಂಕಿತ್ ಗುಪ್ತಾ ತಿಳಿಸಿದರು.

ದೇಶಾದ್ಯಂತ ಹಿಂದಿನ ಒಂದು ವರ್ಷದಲ್ಲಿ ತಮ್ಮ ಪ್ರದೇಶದಲ್ಲಿ ನಕಲಿ ಉತ್ಪನ್ನಗಳ ಹಾವಳಿ ಹೆಚ್ಚಾಗಿದೆ ಎಂದು ಶೇ.74ರಷ್ಟು ಗ್ರಾಹಕರು ನಂಬಿದ್ದಾರೆ ಎಂದು ವರದಿ ಕಂಡುಕೊಂಡಿದೆ. ಉಡುಪು, ಗ್ರಾಹಕ ಇಲೆಕ್ಟ್ರಾನಿಕ್ಸ್, ಆರೋಗ್ಯ ರಕ್ಷಣಾ ಉತ್ಪನ್ನಗಳು, ಎಫ್‌ಎಂಸಿಜಿ, ಕೃಷಿ ರಾಸಾಯನಿಕಗಳು ಮತ್ತು ಆಟೋಮೋಟಿವ್ ಬಿಡಿಭಾಗಗಳಲ್ಲಿ ನಕಲಿ ಉತ್ಪನ್ನಗಳ ಹಾವಳಿ ಅತಿ ಹೆಚ್ಚಾಗಿದೆ ಎಂದು ಗ್ರಾಹಕರು ಭಾವಿಸಿದ್ದಾರೆ ಎಂದು ಅಂಕಿತ್ ಗುಪ್ತಾ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor