ತುಮಕೂರಿನಲ್ಲಿ ಜಪಾನ್ ಕಂಪನಿಗಳಿಗೆ ಅಗತ್ಯ ಜಾಗದ ಪೂರೈಕೆ : ಎಂ.ಬಿ.ಪಾಟೀಲ್
ಬೆಂಗಳೂರು : ಕೋಲ್ಡ್ ಫೋರ್ಜಿಂಗ್ ಮತ್ತು ವಾಹನಗಳ ಚಾಸಿಸ್ ಗಳಿಗೆ ಅಗತ್ಯವಿರುವ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ತಯಾರಿಕೆಗೆ ಹೆಸರಾಗಿರುವ ಜಪಾನಿನ ಮಿನಾಮಿಡ ಕಂಪನಿಯು ರಾಜ್ಯದಲ್ಲಿ ಒಟ್ಟು ಐದು ವರ್ಷಗಳಲ್ಲಿ 70 ಕೋಟಿ ರೂ. ಬಂಡವಾಳ ಹೂಡಲಿದೆ. ಈ ಕಂಪನಿಗೆ ತುಮಕೂರು ಮಶೀನ್ ಟೂಲ್ ಪಾರ್ಕ್ ಪ್ರದೇಶದಲ್ಲಿ 7.25 ಎಕರೆ ಜಾಗ ಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಜಪಾನ್ ಪ್ರವಾಸಕ್ಕೆ ತೆರಳಿರುವ ಅವರು, ಮಿನಾಮಿಡ ಸೇರಿದಂತೆ ಪೆಗಾಸಸ್, ಹಿರಾವೊಕ, ಸುಜಿಕಾವ, ಮಿಹಾನ್ ಶಿಂಕು, ಟಿಎಚ್‍ಎಸ್ ಸ್ಪ್ರಿಂಗ್ಸ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ಕುರಿತು ಮಾಹಿತಿ ನೀಡಿದ್ದಾರೆ.
ಆಟೋಮೋಟಿವ್ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಟಿಎಚ್‍ಎಸ್ ಸ್ಪ್ರಿಂಗ್ಸ್ ಕಂಪನಿ ಕೂಡ ಕರ್ನಾಟಕದಲ್ಲಿ 50 ಕೋಟಿ ರೂ. ಬಂಡವಾಳ ಹೂಡುತ್ತಿದೆ. ಈ ಕಂಪನಿಗೆ ಕೂಡ ತುಮಕೂರಿನಲ್ಲಿ 2 ಎಕರೆ ಜಾಗ ಕೊಡಲಾಗುತ್ತಿದೆ. ಇದು ಕಂಪನಿಯ ಮೊದಲನೇ ಹಂತದ ಹೂಡಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಿನಾಮಿಡ ಕಂಪನಿಯ ತಯಾರಿಕಾ ಘಟಕದಿಂದ 50 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಸಂಬಂಧ ಅದು 2025ರ ಅಕ್ಟೋಬರಿನಲ್ಲೆ ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಈಗಿನ ಗಡುವಿನ ಪ್ರಕಾರ, 2027ರ ಡಿಸೆಂಬರ್ ಹೊತ್ತಿಗೆ ತಯಾರಿಕಾ ಘಟಕವು ತನ್ನ ಚಟುವಟಿಕೆ ಆರಂಭಿಸಲಿದೆ. ಇದು ಕಂಪನಿಯ 2 ಮತ್ತು 3ನೇ ಹಂತಗಳ ವಿಸ್ತರಣೆಯ ಭಾಗವಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಗಾಮೆರ್ಂಟ್ಸ್ ಮತ್ತು ಜವಳಿ ವಲಯಕ್ಕೆ ಬೇಕಾದ ಹೊಲಿಗೆ ಯಂತ್ರಗಳನ್ನು ತಯಾರಿಸುವ ಪೆಗಾಸಸ್ ಕಂಪನಿ ಕೂಡ ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿದೆ. ಈ ಕಂಪನಿಯು ಈಗಾಗಲೇ ಜಪಾನ್, ಚೀನಾ, ವಿಯಟ್ನಾಂ ಮತ್ತು ಮೆಕ್ಸಿಕೋದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಕಂಪನಿಯು ದಕ್ಷಿಣ ಕೊರಿಯಾ, ಜಪಾನ್ ಮತ್ತು ಭಾರತದ ಕಂಪನಿಗಳಿಗೆ ಬೇಕಾದ ಡೈಕಾಸ್ಟಿಂಗ್ ಸೇರಿದಂತೆ ಆಟೋಮೋಟೀವ್ ಬಿಡಿಭಾಗಗಳನ್ನು ರಾಜ್ಯದಲ್ಲಿ ತಯಾರಿಸಿ, ಪೂರೈಕೆ ಮಾಡಲು ಒಲವು ಹೊಂದಿದೆ ಎಂದು ಅವರು ನುಡಿದಿದ್ದಾರೆ.
ಹಿರಾವೋಕ ಕಂಪನಿಯು ರಬ್ಬರ್ ಮೌಲ್ಡ್ ಮತ್ತು ಪ್ರಿಸಿಷನ್ ಮಶೀನಿಂಗ್ ತಯಾರಿಕೆಗೆ ಪ್ರಸಿದ್ಧವಾಗಿದ್ದು, ಭಾರತದಲ್ಲಿ ಸೂಕ್ತ ಸಹಭಾಗಿತ್ವವನ್ನು ಶೋಧಿಸುತ್ತಿದೆ. ಜಪಾನಿನಲ್ಲಿ ಸಕ್ರಿಯವಾಗಿರುವ ಮೌಲ್ಡ್ ಮತ್ತು ಡೈ ಕೈಗಾರಿಕೆಗಳ ಒಕ್ಕೂಟದ ಭಾಗವಾಗಿರುವ ಕಂಪನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಕರೆತರುವ ಭರವಸೆಯನ್ನು ಅದು ನೀಡಿದೆ ಎಂದು ಸಚಿವರು ವಿವರಿಸಿದ್ದಾರೆ.
ಮಾತುಕತೆಯಲ್ಲಿ ಮಿನಾಮಿಡ ಪರವಾಗಿ ಸಿಇಒ ತಕೇಶಿ ಮಿನಾಮಿಡ, ಡಿಜಿಎಂ ಸುರೇಶ್ ರಾಮನ್, ಪೆಗಾಸಸ್ ಆಧ್ಯಕ್ಷ ಶಿಗೆಮಿ ಮಿಮ, ವ್ಯವಸ್ಥಾಪಕ ನಿರ್ದೇಶಕ ಮಿಸಾಮಿಚಿ ಮಿಮ, ಹಿರಾವೊಕ ಅಧ್ಯಕ್ಷ ಮತ್ತು ಸಿಇಒ ಹಿರಾವೊಕ ರೈಸುಕಿ, ಸುಜಿಕಾವ ನಿರ್ದೇಶಕ ಯಮಡ ತೊಮೊಕುಝು ಮತ್ತು ಕಾನೂನು ಸಲಹೆಗಾರ ತುಷಾರ್ ಅಸ್ರಾನಿ, ಮಿಹಾನ್ ಪರವಾಗಿ ಡಿಜಿಎಂ ಮೊಟೊಮಸ ನಿಶಿಯುರ, ಟಿಎಚ್‍ಎಸ್ ಸ್ಪ್ರಿಂಗ್ಸ್ ಸಿಇಒ ದೈಸುಕಿ ಹಶಿಮೊಟೊ ಮತ್ತು ಮಸನೋರಿ ಯಮಾಮೋಟೋ ಪಾಲ್ಗೊಂಡಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯಲ್ ಕೂಡ ಉಪಸ್ಥಿತಿರದ್ದರು.