ಬೆಂಗಳೂರು : ಮೇಕೆದಾಟು ಯೋಜನೆ ಪೂರ್ಣಗೊಳಿಸಿ ಎಂದು ಕ್ಷೇತ್ರದ ಜನ ಆದೇಶ ಮಾಡಿದ್ದಾರೆ. ಅದಕ್ಕೆ ತಲೆಬಾಗಿ ಯೋಜನೆ ರೂಪಿಸಿದ್ದೇವೆ. ಸುಪ್ರಿಂಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಇದು ನನ್ನ ಅವಧಿಯಲ್ಲೆ ಪೂರ್ಣಗೊಳ್ಳಬೇಕು. ಆ ಕೆಲಸವನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾನ ನೀಡಿದರು.

ಶನಿವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪರಿಶಿಷ್ಟ ಜಾತಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಕ್ಷೇತ್ರದ ಜನ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು. ಯಾರೂ ಕೂಡ ವಲಸೆ ಹೋಗಬಾರದು. ಹೀಗಾಗಿ, ಚನ್ನಪಟ್ಟಣ-ರಾಮನಗರದ ಮಧ್ಯೆ ಬೃಹತ್ ಡೈರಿ ಮಾಡಿದ್ದೇವೆ. ಹಾಲಿನ ಬೆಲೆ 7 ರೂ. ಹೆಚ್ಚಳ ಮಾಡಿ, ರೈತರ ಬದುಕು ಹಸನಾಗಲಿ ಎಂದು ಅವರಿಗೆ ನೀಡುತ್ತಿದ್ದೇವೆ. ಕೆರೆಗಳಿಗೆ ನೀರನ್ನು ತುಂಬುವ ಯೋಜನೆ ರೂಪಿಸಿದ್ದೇವೆ. ಇನ್ನು ಎರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರನ್ನು ಹರಿಸುವ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ. ಮನುಷ್ಯತ್ವ ನನಗೆ ಬಹಳ ಮುಖ್ಯ. ಅಂಬೇಡ್ಕರ್ ಅವರ ತತ್ವಗಳು, ಬಸವಣ್ಣನವರ ಆಶಯಗಳ ಮೇಲೆ ನಾನು ರಾಜಕಾರಣವನ್ನು ಮಾಡುತ್ತಿದ್ದೇನೆ. ನನ್ನ ಈ 40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ನೀನು ಯಾವ ಜಾತಿ ಎಂದು ಕೇಳಿಲ್ಲ. ಮಾನವೀಯತೆಯೆ ಬಹುದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ನನಗೆ ಸಿಕ್ಕ ಈ ಅಧಿಕಾರ ನನ್ನದಲ್ಲ, ನಿಮ್ಮದು. ನನ್ನನ್ನು 10 ಬಾರಿ ಸಾತನೂರು, ಕನಕಪುರ ಮಹಾಜನತೆ ಆರಿಸಿ ಆಶೀರ್ವದಿಸಿ ಕಳುಹಿಸಿದ್ದೀರಿ. ಇಂದಿನ ಈ ಅಭಿಮಾನದ ಸನ್ಮಾನದ ಶ್ರೇಯ ನಿಮಗೆ ಸಲ್ಲಬೇಕು. ಸೇವೆ ಮಾಡುವ ಭಾಗ್ಯ ಕೊಟ್ಟಿದ್ದೀರಿ. ನೀವು ಇಟ್ಟಿರುವ ನಂಬಿಕೆ ಉಳಿಸಿಕೊಂಡು, ಕ್ಷೇತ್ರದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕನಕಪುರ ಕ್ಷೇತ್ರದ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯದ ವಿಚಾರವಾಗಿ ವಿಶೇಷ ಕಾಳಜಿ ಹೊಂದಿದ್ದೇನೆ. ಕನಕಪುರ ಅಂದಾಕ್ಷಣ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ ಮತ್ತು ಜವಾಬ್ದಾರಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ವೈರಮುಡಿ ಅವರನ್ನು ಆಯ್ಕೆ ಮಾಡಿದೆ. ನನ್ನ ತೀರ್ಮಾನವನ್ನು ನೋಡಿ ಎಲ್ಲರೂ ನಕ್ಕರು. ತಪ್ಪಿಸಲು ಏನೇನೋ ಮಾಡಿದರು ನಾನು ಜಗ್ಗಲಿಲ್ಲ. ನನಗೆ ಜಾತಿ ಮುಖ್ಯವಲ್ಲ. ವ್ಯಕ್ತಿ, ನಂಬಿಕೆ ಮುಖ್ಯ ಎಂದು ಅವರು ಸ್ಮರಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟ ಮೇಲೆ ಆಸ್ತಿಗಳ ಮೌಲ್ಯಹೆಚ್ಚಾಗಿದೆ. ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡೋಕೆ ಹೆಸರು ಬದಲಿಸಿದ್ದಾನೆ ಅಂತ ನಾಯಕರೊಬ್ಬರು ಆರೋಪಿಸಿದರು. ನಾನು ಯಾವತ್ತಾದರು ನಿಮ್ಮ ಬಳಿ ಬಂದು ಭೂ ವ್ಯವಹಾರ ಮಾಡಿದ್ದೀನಾ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಈ ಬಾರಿ ನಿಮ್ಮ ಬಳಿ ಮತ ಕೇಳಲು ನಾನು ಬರಲೇ ಇಲ್ಲ. ಸಿದ್ದರಾಮಯ್ಯ ಮತ್ತು ನಾನು ರಾಜ್ಯದ ಪ್ರವಾಸ ಮಾಡಿದೆವು. 136 ಸೀಟ್ ಬಂತು. ಈ ಕ್ಷೇತ್ರದ, ರಾಜ್ಯದ ಮಹಾಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. 5 ಗ್ಯಾರಂಟಿಗಳನ್ನು ಕೊಟ್ಟಿದ್ದೇನೆ. ಕ್ಷೇತ್ರದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ., ಬಸ್ ನಲ್ಲಿ ಉಚಿತ ಪ್ರಯಾಣ ಅವಕಾಶ ನೀಡಿದ್ದೇವೆ. ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದ್ದೇವೆ ಎಂದು ಅವರು ನುಡಿದರು.

ಮನೆ ಬಾಗಿಲಿಗೆ ವೃದ್ದಾಪ್ಯ, ಎಲ್ಲ ರೀತಿಯ ಪಿಂಚಣಿ ತಲುಪಿಸುತ್ತಿದ್ದೇವೆ. ಬಡವರಿಗಾಗಿ 15 ಸಾವಿರ ನಿವೇಶನಗಳನ್ನು ಹಂಚಲು ಸಿದ್ದತೆಯಾಗಿದೆ. ಕನಕಪುರದಲ್ಲಿ 80 ನಿವೇಶನ ಹಂಚಿದ್ದೇವೆ. ಬಡವರಿಗೆ 20-30 ಅಳತೆ ಬದಲಾಗಿ 30-40 ಅಡಿ ಅಳತೆಯ ನಿವೇಶನ ವಿತರಿಸುವಂತೆ ಮಾರ್ಗದರ್ಶನ ನೀಡಿದ್ದೇನೆ. ಎಲ್ಲ ಬಡವರು ಕಾರು ತೆಗೆದುಕೊಳ್ಳಬೇಕು, ಹಸು ಕಟ್ಟಬೇಕು, ಅನ್ನೋದು ನನ್ನ ಆಸೆ. ಇದಕ್ಕಾಗಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಸಾತನೂರು ಕೆಂಬಾಳ ಹತ್ತಿರ, ಕಲ್ಲಹಳ್ಳಿ, ಮರಿಯ್ಯನ ದೊಡ್ಡಿ ಮುಂತಾದ 10 ಕಡೆ ಶಾಲೆಗಳು ನಿರ್ಮಾಣ ಆಗುತ್ತಿವೆ. ನಮ್ಮ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗಬೇಕು. ನಾನು ಪಡೆದ ವಿದ್ಯಾಭ್ಯಾಸಕ್ಕಿಂತ ನೀವು ಚೆನ್ನಾಗಿ ಪಡೆದುಕೊಳ್ಳಬೇಕು. ಸ್ವಾಭಿಮಾನ, ಸ್ವಾವಲಂಬನೆಯಿಂದ ಬದುಕಬೇಕು ಎನ್ನುವುದು ನನ್ನ ಆಸೆ ಎಂದ  ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ./ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಅಮ್ಜದ್ ಖಾನ್ ಎಂ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2007ರಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು‌, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.