×
Ad

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಖಂಡನೀಯ: ಸಾತಿ ಸುಂದರೇಶ್

Update: 2025-08-08 00:00 IST

ಬೆಂಗಳೂರು, ಆ.7: ಧರ್ಮಸ್ಥಳದಲ್ಲಿ ದುಷ್ಕರ್ಮಿಗಳ ಗುಂಪು ಕೆಲವು ಯೂಟ್ಯೂಬರ್‌ಗಳ ಮೇಲೆ ಘರ್ಷಣೆ ಮತ್ತು ಹಲ್ಲೆ ನಡೆಸಿ ಅವರ ವಾಹನಗಳನ್ನು ಜಖಂಗೊಳಿಸಿ ಅವರಿಗೆ ಬೆದರಿಕೆ ಒಡ್ಡಿರುವ ಘಟನೆ ಖಂಡನೀಯ ಎಂದು ಭಾರತ ಕಮ್ಯುನಿಷ್ಟ್ ಪಕ್ಷ(ಸಿಪಿಐ)ದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.

ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಧರ್ಮಸ್ಥಳದ ಗ್ರಾಮದಲ್ಲಿ ಕೆಲವು ದಶಕಗಳಿಂದ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಹಾಗೂ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಕುರಿತು ಯೂಟ್ಯೂಬರ್‌ಗಳು ತಮ್ಮ ಚಾನೆಲ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದರು. ಅವರ ಮೇಲೆ ದೈಹಿಕವಾಗಿ ದಾಳಿ ಮಾಡುವುದು ಹಲ್ಲೆಕೋರರ ಹೇಡಿತನದ ಮತ್ತು ಆಂತರಿಕ ಆತಂಕದ ಲಕ್ಷಣವೇ ಆಗಿದೆ. ಎಸ್‌ಐಟಿ ತನಿಖೆ ಮುಕ್ತಾಯವಾಗಿ ಆಪಾದಿತರನ್ನು ಬಂಧಿಸುವವರೆಗೂ ಅವರನ್ನು ಬಂಧನದಲ್ಲೇ ಇಡುವ ಅಥವಾ ಜಿಲ್ಲೆಯಿಂದ ಗಡೀಪಾರು ಮಾಡುವ ಕ್ರಮಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಪೊಲೀಸರು ಧರ್ಮಸ್ಥಳ ಕ್ಷೇತಕ್ಕೆ ಆಗಮಿಸುವ ಭಕ್ತರಿಗೆ ಸೂಕ್ತ ಸುರಕ್ಷತೆ ನೀಡಿ ಅವರಿಗೆ ಧೈರ್ಯ, ವಿಶ್ವಾಸವನ್ನು ನೀಡಬೇಕು. ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮಹಿಳೆಯರು ಕಾಣೆಯಾಗಿರುವ ನೂರಾರು ಪ್ರಕರಣಗಳಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಲಿಖಿತವಾಗಿ ತಿಳಿಸಿದ್ದಾಗಿ ಸರಕಾರ ರಚಿಸಿದ್ದ ಉಗ್ರಪ್ಪ ಸಮಿತಿಯ ಅಧ್ಯಕ್ಷರಾಗಿದ್ದ ವಿ.ಎಸ್.ಉಗ್ರಪ್ಪ ಅವರೇ ಹೇಳಿಕೆ ನೀಡಿರುತ್ತಾರೆ. ಅದು ಇತ್ತೀಚಿನ ದೂರುಗಳ ಜೊತೆ ತಾಳೆಯೂ ಆದಂತಿದೆ ಎಂದು ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಚಿಸಲಾಗಿರುವ ಎಸ್‌ಐಟಿ ನಿಷ್ಪಕ್ಷ ಮತ್ತು ನಿರ್ಭೀತಿಯಿಂದ ಕಾರ್ಯನಿರ್ವಹಿಸಿ ವರದಿ ನೀಡುವಂತೆ ಮುಕ್ತ ಅವಕಾಶ ನೀಡಬೇಕು. ಈ ತನಿಖೆ ಮುಗಿಯುವವರೆಗೂ ಎಸ್‌ಐಟಿ ಮುಖ್ಯಸ್ಥರಾಗಿರುವ ಡಾ.ಪ್ರಣವ್ ಮೊಹಂತಿ ಅವರನ್ನು ಬೇರೆಲ್ಲೂ ವರ್ಗವಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News